ನರಭಕ್ಷಕ ಚಿರತೆಗೆ ರೈತ ಮಹಿಳೆ ಬಲಿ

KannadaprabhaNewsNetwork | Published : Nov 19, 2024 12:47 AM

ಸಾರಾಂಶ

ದಾಬಸ್‌ಪೇಟೆ: ಹೊಲದಲ್ಲಿ ಮೇವು ಕೊಯ್ಯುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ಮಹಿಳೆಯ ತಲೆಯನ್ನೇ ಭಕ್ಷಿಸಿದ್ದಲ್ಲದೆ, ದೇಹವನ್ನೂ ಕೊಂಡೊಯ್ಯಲು ಪೊಲೀಸರು, ಗ್ರಾಮಸ್ಥರ ಕಣ್ತಪ್ಪಿಸಿ ಯತ್ನಿಸಿರುವ ಘಟನೆ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಬಳಿಯ ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದ ಬಳಿ ನಡೆದಿದೆ.

ದಾಬಸ್‌ಪೇಟೆ: ಹೊಲದಲ್ಲಿ ಮೇವು ಕೊಯ್ಯುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ಮಹಿಳೆಯ ತಲೆಯನ್ನೇ ಭಕ್ಷಿಸಿದ್ದಲ್ಲದೆ, ದೇಹವನ್ನೂ ಕೊಂಡೊಯ್ಯಲು ಪೊಲೀಸರು, ಗ್ರಾಮಸ್ಥರ ಕಣ್ತಪ್ಪಿಸಿ ಯತ್ನಿಸಿರುವ ಘಟನೆ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ಬಳಿಯ ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದ ಬಳಿ ನಡೆದಿದೆ.

ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದ ಕರಿಯಮ್ಮ(45) ಮೃತ ದುರ್ದೈವಿ. ಭಾನುವಾರ ಸಂಜೆ ಕರಿಯಮ್ಮ ಹೊಲದಲ್ಲಿ ದಾಳಿ ಮಾಡಿದ ಚಿರತೆ, ಹೊಲದಿಂದ ಶಿವಗಂಗೆ ಬೆಟ್ಟದ ಕಡೆಗೆ ದೇಹ ಎಳೆದೊಯ್ದು ತಲೆಯ ಭಾಗ ತಿಂದು ಹಾಕಿದೆ. ಸಂಜೆ 6 ಗಂಟೆಯಾದರೂ ಕರಿಯಮ್ಮ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹೊಲದ ಬಳಿ ಹೋಗಿ ನೋಡಿದರೆ ಅಲ್ಲಿ ಕರಿಯಮ್ಮ ಕಾಣಲಿಲ್ಲ.

ರಾತ್ರಿಯಾದರೂ ಹುಡಿಕಾಡುತ್ತಿದ್ದ ಮನೆಯವರಿಗೆ ಮುದ್ವಿರೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ರಕ್ತದ ಕಲೆ ಬಿದ್ದಿರುವುದು ಕಂಡು ಬಂದಿದೆ. ಆ ಕಲೆಯ ಜಾಡನ್ನು ಹಿಡಿದು ಹುಡುಕಿಕೊಂಡು ಹೋದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರು, ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ, ಗ್ರಾಮಸ್ಥರು ಮೃತ ಮಹಿಳೆ ಶವದ ಬಳಿ ಬೆಂಕಿ ಹಾಕಿಕೊಂಡು ರಾತ್ರಿಯೆಲ್ಲಾ ಕಾಯುತ್ತಿದ್ದವರಿಗೆ ಮತ್ತೆ ಕಾಣಿಸಿಕೊಂಡ ಚಿರತೆ ಪೊಲೀಸರು ಹಾಗೂ ಸಾರ್ವಜನಿಕರನ್ನೂ ಬೆದರಿಸಿದ ಚಿರತೆ ಮೃತದೇಹವನ್ನು ಹೊತ್ತೊಯಲು ರಾತ್ರಿ 11 ಗಂಟೆಯಲ್ಲಿ ಮತ್ತೆ ಯತ್ನಿಸಿದೆ. ಕೂಡಲೇ ಅಲ್ಲೇ ಇದ್ದ ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಮತ್ತೊಮ್ಮೆ ಚಿರತೆ ಬಾಯಿಯಿಂದ ಮೃತದೇಹವನ್ನು ಗ್ರಾಮಸ್ಥರು ಬಿಡಿಸಿಕೊಂಡಿದ್ದಾರೆ.

ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು, ಬಸವಾಪಟ್ಟಣ, ಆಲದಹಳ್ಳಿ ಬೆಟ್ಟ ಸೇರಿದಂತೆ ಸೋಂಪುರ ಹೋಬಳಿಯ ಹಲವೆಡೆ ಚಿರತೆಗಳ ಉಪಟಳ ಹೆಚ್ಚಾಗಿದೆ. ಇದುವರೆಗೂ ಪ್ರಾಣಿಗಳನ್ನು ಭಕ್ಷಿಸಿದ್ದ ಚಿರತೆ, ಇದೀಗ ಮಾನವರ ಮೇಲೆ ಎರಗಿದೆ. ಅರಣ್ಯ ಇಲಾಖೆ ಬೋನುಗಳನ್ನಿಟ್ಟರೂ ಚಿರತೆ ಹಾವಳಿ ಕಡಿಮೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾರ್ಯಾಚರಣೆ ಆರಂಭ:

ಚಿರತೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳ ತಂಡ ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಡಿಸಿಎಫ್ ಸೆರೀನಾ ಸಿಕ್ಕಲಿಗಾರ್ ತಂಡ 8 ಬೋನು 20 ಸಿಸಿ ಟಿವಿ, ಬನ್ನೇರುಘಟ್ಟದ ಅರವಳಿಕೆ ವೈದ್ಯರಾದ ಡಾ.ಕಿರಣ್ ಸೇರಿದಂತೆ ಸುಮಾರು 60 ಅರಣ್ಯ ರಕ್ಷಕರ ತಂಡ ಕಾರ್ಯಾಚರಣೆ ಆರಂಭಿಸಿದೆ. ಅರಣ್ಯಾಧಿಕಾರಿಗಳಾದ ಎಸಿಎಫ್ ನಿಜಾಮುದ್ದೀನ್, ಆರ್‌ಎಫ್‌ಒ ಮಂಜುನಾಥ್, ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

15 ಲಕ್ಷ ಪರಿಹಾರ ಘೋಷಣೆ:

ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ ಹಾಗೂ ಪ್ರತಿ ತಿಂಗಳು 4 ಸಾವಿರ ಪರಿಹಾರ ಧನ ಘೋಷಣೆ ಮಾಡಿದೆ. ಕೂಡಲೇ 5 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಮೃತ ಕುಟುಂಬದ ಸಹೋದರರು ತಿಳಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆಯಷ್ಟೇ ಮೃತಪಟ್ಟಿರುವ ಮಹಿಳೆಯ ಮನೆಯಲ್ಲಿದ್ದ ಇನ್ನೊಬ್ಬ ಮಹಿಳೆ ಮೇಲೆ ದಾಳಿ ಮಾಡಿ ಬೆನ್ನು, ಕಾಲಿನ ಭಾಗವನ್ನು ಚಿರತೆ ತಿಂದು ಹಾಕಿತ್ತು. ಮಹಿಳೆಯರನ್ನೇ ಗುರಿ ಮಾಡಿಕೊಂಡಿರುವ ಚಿರತೆ ಸ್ಥಳೀಯರ ನಿದ್ದೆಗೆಡಿಸಿದೆ.

ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ್............

ಚಿರತೆ ಹಿಡಿಯಲು ಟಾಸ್ಕ್‌ಪೋರ್ಸ್ ರಚಿಸಿದ್ದೇವೆ. ಚಿರತೆಯನ್ನು ಹಿಡಿಯಲು ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ. 8 ಬೋನು ಮತ್ತು 20 ಸಿಸಿಟಿವಿ, ಡ್ರೋನ್ ಮೂಲಕ ಚಿರತೆ ಜಾಡು ಪತ್ತೆ ಹಚ್ಚುತ್ತೇವೆ. ಯಾರೂ ಒಬ್ಬಂಟಿಯಾಗಿ ಓಡಾಡಬಾರದು. ವಾಹನಗಳ ಮೂಲಕ ಸಾರ್ವಜನಿಕರಲ್ಲಿ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತೇವೆ.

-ಶಿವಶಂಕರ್, ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು

ಕೋಟ್ ...........

ಚಿರತೆ ಹಾವಳಿ ಬಗ್ಗೆ ವಿಧಾನಸಭೆ ಸದನದಲ್ಲೇ ಗಮನ ಸೆಳೆದು ಅರಣ್ಯ ಸಚಿವರನ್ನು ಪ್ರಶ್ನಿಸಿದ್ದೇನೆ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಮೃತ ಮಹಿಳೆಯ ಕುಟುಂಬಕ್ಕೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸುತ್ತಮುತ್ತಲ ಗ್ರಾಮಸ್ಥರು, ಜಾನುವಾರುಗಳು ಹೊಲಗದ್ದೆಗಳ ಬಳಿ ಜಾಗ್ರತೆಯಿಂದ ಓಡಾಡಬೇಕು.

-ಎನ್.ಶ್ರೀನಿವಾಸ್, ಶಾಸಕ

ಕೋಟ್ ...............

ಚಿರತೆ ಅರಣ್ಯ ಗಡಿ ಭಾಗದ ಗ್ರಾಮಗಳ ಸುತ್ತಮುತ್ತ ಹಸು, ಮೇಕೆ, ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಈಗಾಗಲೇ ಹಲವಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಆದರೂ ಎಚ್ಚೆತ್ತುಕೊಳ್ಳದ ಪರಿಣಾಮ ಚಿರತೆ ಮಹಿಳೆಯನ್ನೇ ಬಲಿ ಪಡೆದಿದೆ. ಈಗಲಾದರೂ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಬೇಕಿದೆ.

-ಉಮಾರಾಜಣ್ಣ, ಗ್ರಾಪಂ ಸದಸ್ಯೆ

ಫೋಟೋ 6 : ಮೃತ ಕರಿಯಮ್ಮ

ಪೋಟೋ 7. ಘಟನಾ ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

ಪೋಟೋ 8 : ಚಿರತೆ ಹಿಡಿಯಲು ಇಟ್ಟಿರುವ ಬೋನು.

ಪೋಟೋ 9 : ಚಿರತೆ ಚಲನವಲನ ಗಮನಿಸಲು ಕ್ಯಾಮೆರಾ ಅಳವಡಿಕೆ.

Share this article