ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶದಲ್ಲಿ ಏರುತ್ತಿರುವ ಜನಸಂಖ್ಯೆಗನುಗುಣವಾಗಿ ನಾವು ಆಹಾರವನ್ನು ದ್ವಿಗುಣಗೊಳಿಸಬೇಕಾಗಿದೆ. ಕೃಷಿಭೂಮಿಗೆ ರಾಸಾಯನಿಕ ಗೊಬ್ಬರವನ್ನು ಯಥೇಚ್ಛವಾಗಿ ಬಳಸುವುದಲ್ಲದೆ, ಬೆಳೆಗಳಿಗೆ ಸಿಂಪಡಿಸುವ ಔಷಧಿಯು ವಿಷಕಾರಿಯಾಗಿದೆ. ಇದು ಆರೋಗ್ಯಕ್ಕೆ ಹಾನಿಕರ. ಹೆಚ್ಚು ವಿಷ ಉಣಿಸಿದಷ್ಟು ಭೂಮಿ ನಮಗೂ ವಿಷ ಉಣಿಸಲಿದೆ. ಈ ನಿಟ್ಟಿನಲ್ಲಿ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಕಾರ್ಯಾಗಾರ ಏರ್ಪಡಿಸಿ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ರೈತ ದಸರಾ ಇದೊಂದು ಸುಂದರ ಕಾರ್ಯಕ್ರಮ. ಮೈಸೂರಿನಿಂದ ಪ್ರತ್ಯೇಕ ಜಿಲ್ಲೆಯಾದ ಬಳಿಕ 9ನೇ ಚಾಮರಾಜ ಒಡೆಯರ್ ಜನ್ಮತಳೆದ ಚಾಮರಾಜನಗರದಲ್ಲೂ ದಸರಾ ನಡೆಸುವ ಸದುದ್ದೇಶ ಔಚಿತ್ಯಪೂರ್ಣವಾಗಿದೆ. ರೈತರೊಂದಿಗೆ ನಾವೆಲ್ಲರೂ ಬೆರೆಯುವ ಅವಕಾಶವನ್ನು ರೈತ ದಸರಾ ಒದಗಿಸಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಬಗ್ಗೆ ಹೋಬಳಿ ಮಟ್ಟದಲ್ಲಿ ರೈತರಿಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಡೀಸಿ ಶಿಲ್ಪಾನಾಗ್ ಮಾತನಾಡಿ, ರೈತ ದಸರಾ ಚೆಲುವ ಚಾಮರಾಜನಗರ ದಸರಾ ಮಹೋತ್ಸವದ ಒಂದು ಭಾಗವಾಗಿದೆ. ರೈತರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಗಟ್ಟಿಗೊಳಿಸಲು ರೈತ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜೈ ಜವಾನ್, ಜೈ ಕಿಸಾನ್, ರೈತರು ದೇಶದ ಬೆನ್ನುಲುಬು. ನಾವು ಸಹ ರೈತ ಕುಟುಂಬದಿಂದ ಬಂದವರು. ಅನ್ನ ನೀಡುವ ರೈತರಿಂದಲೇ ನಾವೆಲ್ಲರೂ ಬದುಕಬೇಕಾಗಿದೆ. ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಲಾಗಿದೆ. ರೈತ ದಸರಾ ಪ್ರಯುಕ್ತ ಏರ್ಪಡಿಸಲಾಗಿರುವ ತಾಂತ್ರಿಕ ಕಾರ್ಯಾಗಾರವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಸರ್ವರೋಗಕ್ಕೂ ಆಹಾರಕ್ರಮವೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದ ಭೂಮಿಯ ಆಯುಸ್ಸು ಕ್ಷೀಣಿಸುತ್ತಿದ್ದು, ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಿ ನೀರು ಉಳಿವಿಗೆ ರೈತರು ಮುಂದಾಗಬೇಕಿದೆ. ಸಾವಯವ ಇಂಗಾಲವನ್ನು ವೃದ್ಧಿಸಬೇಕಿದೆ. ಗರಿಕೆಯಿಂದ ಹಿಡಿದು ಎಲ್ಲವೂ ಸಿರಿಧಾನ್ಯಗಳೇ ಆಗಿವೆ. ನಾವು ಆಹಾರವನ್ನು ನಮಗೋಸ್ಕರ ಬೆಳೆಯಬೇಕಾಗಿದ್ದು, ಮಾರುಕಟ್ಟೆಯನ್ನು ನಾವೇ ಹುಡುಕಿಕೊಳ್ಳಬೇಕಾಗಿದೆ. ಮಾರುಕಟ್ಟೆ ಕ್ರಾಂತಿಯೂ ಆಗಬೇಕಾಗಿದೆ. ಕೃಷಿ ವ್ಯವಸ್ಥೆ ಉದ್ದಿಮೆಯಾಗಿ ಪರಿವರ್ತನೆಯಾಗಬೇಕು ಎಂದರು.
ಅದ್ಧೂರಿ ಮೆರವಣಿಗೆ
ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ವೀರಗಾಸೆ, ಗೊರವರ ಕುಣಿತ, ಹುಲಿವೇಷ, ಕಂಸಾಳೆ ಕಲಾವಿದರ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರುಗು ನೀಡಿದವು. ಕಬ್ಬು, ಬಾಳೆ, ತಳಿರು, ತೋರಣಗಳಿಂದ ಅಲಂಕೃತಗೊಂಡಿದ್ದ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಅಲ್ಲದೆ ಕೃಷಿ ಸಂಬಂಧಿತ ವಿವಿಧ ಇಲಾಖೆಗಳಾದ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳ ಸ್ತಬ್ದಚಿತ್ರಗಳು ಮೆರವಣಿಗೆಯ ಅಂದ ಹೆಚ್ಚಿಸಿದ್ದವು.