ಲಕ್ಷ್ಮೇಶ್ವರ: ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದೆ. ಇದರಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ಸಮಗ್ರ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಈ ವೇಳೆ ಮಂಜುನಾಥ ಮಾಗಡಿ, ಎಂ.ಎಸ್. ದೊಡ್ಡಗೌಡರ ಹಾಗೂ ರವಿಕಾಂತ ಅಂಗಡಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುವಂತಾಗಬೇಕು ಎಂದು ಕೇಂದ್ರ ಸರ್ಕಾರ ಎಂಎಸ್‌ಸಿ ಬೆಲೆ ನಿಗದಿಪಡಿಸಿದೆ. ರಾಜ್ಯದಲ್ಲಿ ಈ ವರ್ಷ ರೈತರು ಅತಿ ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ, ಹೀಗಾಗಿ ಬೆಲೆ ಕುಸಿತವಾಗಿದೆ. ಅದಕ್ಕಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭ ಮಾಡುವಂತೆ ಆಗ್ರಹಿಸಿ 18 ದಿನಗಳ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಯಿತು. ಆನಂತರ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಅನುಮತಿ ನೀಡಿತು. ಆದರೆ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಕೈತೊಳೆದುಕೊಳ್ಳುವ ಕೆಲಸ ಮಾಡಿತು ಎಂದು ಹೇಳಿದರು.
ಸಾವಿರಾರು ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ಅಡಿಯಲ್ಲಿ ನ್ಯಾಯ ಸಿಗುತ್ತದೆ ಎಂಬ ಆಶಾಭಾವನೆಯಿಂದ ನಾವು ಹೋರಾಟ ಕೈಬಿಟ್ಟ ಆನಂತರ ಸರ್ಕಾರಿ ಅಧಿಕಾರಿಗಳು ಹಾಗೂ ಖರೀದಿ ಕೇಂದ್ರಗಳು ತಮಗೆ ಇಷ್ಟವಾದ ರೀತಿಯಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಿ, ರೈತರು ಬಾಳಲ್ಲಿ ಚೆಲ್ಲಾಟವಾಡುವ ಕಾರ್ಯವನ್ನು ಮಾಡುತ್ತಿರುವುದು ಖಂಡನೀಯ. ಆದ್ದರಿಂದ ಸರ್ಕಾರ ರೈತರು ಬೆಳೆದ ಮೆಕ್ಕೆಜೋಳ ಖರೀದಿ ಮಾಡಲು ಸ್ಥಗಿತಗೊಳಿಸಿರುವ ನೋಂದಣಿ ಆರಂಭಿಸಬೇಕು ಹಾಗೂ ಈಗಾಗಲೇ ನೋಂದಣಿ ಮಾಡಿರುವ ಎಲ್ಲ ರೈತರ ಮೆಕ್ಕೆಜೋಳ ಖರೀದಿಸಬೇಕು ಎಂದು ಆದೇಶ ಹೊರಡಿಸಿ, ರೈತರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಇಲ್ಲದೇ ಹೋದಲ್ಲಿ ಮತ್ತೆ ರೈತರು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.ರೈತಪರ ಹೋರಾಟದ ವೇಳೆ ವೇದಿಕೆಯಲ್ಲಿನ ಲೋಕನಾಯಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿಲ್ಲ. ಅಚಾತುರ್ಯದಿಂದ ಸಣ್ಣ ಪುಟ್ಟ ತಪ್ಪುಗಳು ನಡೆದು ಹೋಗಿರಬಹುದು. ಆದರೆ ಉದ್ದೇಶಪೂರ್ವಕವಾಗಿ ಯಾರೂ ಅಗೌರವ ತೋರಿಸಿಲ್ಲ. ಸಣ್ಣ ಪ್ರಮಾದವನ್ನು ದೊಡ್ಡದು ಮಾಡುವುದನ್ನು ಬಿಡಬೇಕು. ಅದಕ್ಕಾಗಿ ನಮ್ಮಿಂದ ತಿಳಿಯದೇ ಆಗಿರುವ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಕೇಳುವ ಕಾರ್ಯವನ್ನು ಸಮಗ್ರ ರೈತಪರ ಹೋರಾಟ ವೇದಿಕೆಯ ಮುಖಂಡರು ಮಾಡುತ್ತೇವೆ ಎಂದು ಒಕ್ಕೊರಲಿನಿಂದ ಹೇಳಿದರು.
ಈ ವೇಳೆ ಪೂರ್ಣಾಜಿ ಕರಾಟೆ, ನಾಗರಾಜ ಚಿಂಚಲಿ, ಚನ್ನಪ್ಪ ಷಣ್ಮುಖಿ, ಸೋಮಣ್ಣ ಡಾಣಗಲ್ಲ, ಹೊನ್ನಪ್ಪ ವಡ್ಡರ, ಸುರೇಶ ಹಟ್ಟಿ, ಟಾಕಪ್ಪ ಸಾತಪೂತೆ, ಗುರಪ್ಪ ಮುಳಗುಂದ. ಖಾನಸಾಬ್ ಸೂರಣಗಿ, ಪ್ರಕಾಶ ಕೊಂಚಿಗೇರಿಮಠ ಸೇರಿದಂತೆ ಅನೇಕರು ಇದ್ದರು.