ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರ ಮನವಿ

KannadaprabhaNewsNetwork | Published : Dec 29, 2024 1:16 AM

ಸಾರಾಂಶ

ದಾಬಸ್‍ಪೇಟೆ: ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಕೈಗಾರಿಕೆಗಳ ಹೆಸರಿನಲ್ಲಿ ಸರ್ಕಾರ ಮರಣ ಶಾಸನ ಬರೆಯುತ್ತಿದೆ, ಹರಿಸಿ ಅಡಿಕೆ, ತೆಂಗು, ಮಾವು ತೋಟಗಳಿರುವ ಭೂಮಿ ಕುರಿತು ನಿಷ್ಪಕ್ಷಪಾತ ವಾಸ್ತವಾಂಶದ ವರದಿ ಸಲ್ಲಿಸಿ ರೈತರನ್ನು ಉಳಿಸಿ ಎಂದು ತ್ಯಾಮಗೊಂಡ್ಲು ಹೋಬಳಿಯ ಕೆಎಡಿಬಿಐ ಭೂಸ್ವಾಧೀನ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ದಾಬಸ್‍ಪೇಟೆ: ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಕೈಗಾರಿಕೆಗಳ ಹೆಸರಿನಲ್ಲಿ ಸರ್ಕಾರ ಮರಣ ಶಾಸನ ಬರೆಯುತ್ತಿದೆ, ಹರಿಸಿ ಅಡಿಕೆ, ತೆಂಗು, ಮಾವು ತೋಟಗಳಿರುವ ಭೂಮಿ ಕುರಿತು ನಿಷ್ಪಕ್ಷಪಾತ ವಾಸ್ತವಾಂಶದ ವರದಿ ಸಲ್ಲಿಸಿ ರೈತರನ್ನು ಉಳಿಸಿ ಎಂದು ತ್ಯಾಮಗೊಂಡ್ಲು ಹೋಬಳಿಯ ಕೆಎಡಿಬಿಐ ಭೂಸ್ವಾಧೀನ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ, ಬಿದಲೂರು ಹಾಗೂ ಹನುಮಂತಪುರ ಭಾಗದ ರೈತರಿಗೆ ಭೂಸ್ವಾಧೀನ ಸಂಬಂಧ 28(3) ನೋಟಿಸ್ ನೀಡಲು ಬಂದ ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಶಿವೇಗೌಡರಿಗೆ ರೈತರು ತಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ, 487 ಎಕರೆ ಭೂಪ್ರದೇಶದಲ್ಲಿ 250 ಎಕರೆಯಷ್ಟು ವಾಣಿಜ್ಯ ಬೆಳೆಗಳಿವೆ ಎಂದು ಒಗ್ಗಟ್ಟು ಪ್ರದರ್ಶಿಸಿದರು.

ಹನುಮಂತಪುರ ಗ್ರಾಮದ ರೈತ ಮುಖಂಡ ವಿಜಯ್‌ಕುಮಾರ್ ಮಾತನಾಡಿ, ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಮೂಲಕ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ, ಕೋಡಿಪಾಳ್ಯ ಹಾಗೂ ಬಿದಲೂರು ಗ್ರಾಮಗಳ 485 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 28(1), 28(2) ನೋಟಿಸ್ ನೀಡಿದೆ. ಆದರೆ, ನಾವು ಯಾವುದೇ ಕಾರಣಕ್ಕೂ ಭೂಮಿಯನ್ನು ಕೊಡುವುದಿಲ್ಲ ಅಂತ ನೋಟಿಸ್‌ಗೆ ಉತ್ತರ ಕೊಟ್ಟಿದ್ದೇವೆ. ಆದರೂ ಮೂರನೇ ನೋಟಿಸ್ ನೀಡಲು ಅಧಿಕಾರಿಗಳು ಬಂದಿದ್ದಾರೆ. ಸರ್ಕಾರ ಅಧಿಕಾರಿಗಳಿಗೆ ಒತ್ತಡ ಹಾಕಿ ರೈತರ ಭೂಮಿ ಕಬಳಿಸಲು ಸಂಚು ಹಾಕಿದೆ, ಕೆಎಡಿಬಿಐ ಹೆಸರಿನಲ್ಲಿ ಭೂಮಾಫಿಯಾ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯುವ ಪ್ರದೇಶ ಕೂಡ ಇದಾಗಿದ್ದು, ಕೈಗಾರಿಕೆಗಳ ಸ್ಥಾಪನೆಯಿಂದ ನೀರು ಕಲುಷಿತವಾಗುತ್ತದೆ. ಬೆಂಗಳೂರಿಗೆ ಕಲುಷಿತ ನೀರು ಸರಬರಾಜಾಗುತ್ತದೆ. ಇದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.

ರೈತ ನರಸಿಂಹಯ್ಯ ಮಾತನಾಡಿ, 250ಕ್ಕೂ ಹೆಚ್ಚು ಎಕರೆ ತೆಂಗು, ಅಡಿಕೆ, ಮಾವು, ಹಲಸು, ಇನ್ನಿತರ ಮರಗಿಡಗಳನ್ನು ಹೊಂದಿದ ಕೊಳವೆ ಬಾವಿಗಳು ಇರುವ, ಅತೀ ಕಡಿಮೆ ಆಳಕ್ಕೆ ನೀರು ಸಿಗುವ ತೋಟಗಾರಿಕಾ ಭೂಮಿಯನ್ನು ಹಾಳು ಮಾಡಿ ಕೈಗಾರಿಕೆಗಳನ್ನು ನಿರ್ಮಿಸಿದರೇ ಹೊಟ್ಟೆಗೆ ತಿನ್ನುವ ಅನ್ನವನ್ನು ಕೈಗಾರಿಕೆಯಲ್ಲಿ ಉತ್ಪಾದಿಸಲು ಸಾಧ್ಯವಾಗುತ್ತದೆಯೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ರೈತರಾದ ಮುನಿಯಪ್ಪ, ಮಲ್ಲಿಕಾರ್ಜುನ, ತಿಮ್ಮೇಗೌಡ, ಶಿವರುದ್ರಯ್ಯ, ಶಶಿಕುಮಾರ್, ರುದ್ರೇಶ್, ಮಹೇಶ್, ಸಿದ್ದರಾಜು, ಚಂದ್ರಶೇಖರ್, ರಂಗನಾಥ್, ಸೇರಿದಂತೆ ಕೋಡಿಪಾಳ್ಯ, ಬಿದಲೂರು ರೈತರು ಹಾಜರಿದ್ದರು.

ಕೋಟ್‌.............

ನಾವು ರೈತರ ಆಕ್ಷೇಪಣೆಗೆ ನೋಟಿಸ್ ನೀಡಿದ್ದೇವೆ. ಅಕ್ಷೇಪಣೆಗೆ ಅನುಗುಣವಾಗಿ ಸ್ಥಳ ಪರಿಶೀಲನೆ ಮಾಡಿ, ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಸುತ್ತೇವೆ. ಅಲ್ಲಿನ ನಿರ್ಧಾರದಂತೆ ನಾವು ಕಾರ್ಯನಿರ್ವಹಿಸುತ್ತೇವೆ.

-ಶಿವೇಗೌಡ, ಭೂಸ್ವಾಧೀನಾಧಿಕಾರಿ, ಕೆಐಎಡಿಬಿ

ಪೋಟೋ 7 :

ತ್ಯಾಮಗೊಂಡ್ಲು ಹೋಬಳಿಯ ಬಿದಲೂರು, ಕೋಡಿಪಾಳ್ಯ ಗ್ರಾಮದ 487 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೆಎಡಿಬಿಐ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Share this article