ಬುದ್ದಿಮಾಂದ್ಯ ಮಕ್ಕಳ ಪುನಶ್ವೇತನ ಸಂಸ್ಥೆಗೆ ನಿವೇಶನ

KannadaprabhaNewsNetwork | Published : Nov 26, 2024 12:51 AM

ಸಾರಾಂಶ

ಇಲ್ಲಿನ ಸಂಸ್ಥೆಯ ಆಡಳಿತ ಮಂಡಳಿ ಮತ್ತಷ್ಟು ಮಕ್ಕಳನ್ನು ಪೋಷಣೆ ಮಾಡಲು ಮುಂದಾಗಬೇಕು. ನೂತನ ವಸತಿ ಶಾಲೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆಯಲು ಶಾಸಕರು ಚರ್ಚಿಸಲಿದ್ದಾರೆ. ಶಾಸಕರ ಅನುದಾನದಿಂದ ೨೦ ಲಕ್ಷ ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು. ಮೊದಲ ಕಂತನಲ್ಲಿ ೧೦ ಲಕ್ಷ, ನಂತರ ಕಟ್ಟಡ ಪೂರ್ಣಗೊಳ್ಳಲು ೧೦ ಲಕ್ಷ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಮಾಲೂರು

ಕೆಲವರು ಹಣ ಮಾಡುವ ಉದ್ದೇಶದಿಂದ ಸಮಾಜದಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಇಲ್ಲಿನ ನಂದಾದೀಪ ಬುದ್ಧಿಮಾಂದ್ಯ ಮಕ್ಕಳ ಪುನಶ್ಚೇತನ ಸಂಸ್ಥೆ ೨೪ ವರ್ಷಗಳಿಂದ ಮಕ್ಕಳನ್ನು ಕಾಪಾಡಿಕೊಂಡು ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.

ಅವರು ಪಟ್ಟಣದ ನಂದಾ ದೀಪ ಅಂಗವಿಕಲರ ಶಿಕ್ಷಣ ಮತ್ತು ಪುನಶ್ಚೇತನ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಯೋಜನಾ ಪ್ರಾಧಿಕಾರದಿಂದ ಮಂಜೂರಾಗಿರುವ ಸಿಎ ನಿವೇಶನದಲ್ಲಿ ನೂತನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

20 ವರ್ಷಗಳ ಪ್ರಯತ್ನದ ಫಲ

ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ೨೦ ವರ್ಷಗಳಿಂದ ನಿವೇಶನಕ್ಕಾಗಿ ಪ್ರಯತ್ನಪಟ್ಟಿದ್ದರು, ಆದರೆ ಇದುವರೆಗೂ ನಿವೇಶನ ಪಡೆಯಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಯೋಜನಾ ಪ್ರಾಧಿಕಾರದಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಒಳ್ಳೆಯ ಸ್ಥಳ ಹುಡುಕಿ ಕೊಟ್ಟಿದ್ದಾರೆ ಎಂದರು.

ಇಲ್ಲಿನ ಸಂಸ್ಥೆಯ ಆಡಳಿತ ಮಂಡಳಿ ಮತ್ತಷ್ಟು ಮಕ್ಕಳನ್ನು ಪೋಷಣೆ ಮಾಡಲು ಮುಂದಾಗಬೇಕು. ನೂತನ ವಸತಿ ಶಾಲೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆಯಲು ಚರ್ಚಿಸಿಸಲಾಗುವುದು. ಶಾಸಕರ ಅನುದಾನದಿಂದ ೨೦ ಲಕ್ಷ ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು. ಮೊದಲ ಕಂತನಲ್ಲಿ ೧೦ ಲಕ್ಷ, ನಂತರ ಕಟ್ಟಡ ಪೂರ್ಣಗೊಳ್ಳಲು ೧೦ ಲಕ್ಷ ನೀಡಲಾಗುವುದು ಎಂದರು.

ಶಾಸಕರಿಗೆ ಅಭಿನಂದನೆ

ಸಂಸ್ಥೆಯ ಕಾರ್ಯದರ್ಶಿ ಎಂ ಎಸ್ ಅಪ್ಪುರಾವ್ ಮಾತನಾಡಿ, ವಸತಿ ಶಾಲೆಯಲ್ಲಿ ಶಿಕ್ಷಕರು ತಾಳ್ಮೆಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ಮಕ್ಕಳ ವಸತಿ ಶಾಲೆಗೆ ಸ್ವಂತ ನೆಲೆಯನ್ನು ಕಲ್ಪಿಸಿಕೊಡಲು ಶಾಸಕರು ನಮಗೆ ನಿವೇಶನವನ್ನು ದೊರಕಿಸಿ ಕೊಟ್ಟಿದ್ದಾರೆ. ಅವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ, ಸದಸ್ಯ ಆರ್ ವೆಂಕಟೇಶ್, ದರಕಾಸ್ತು ಸಮಿತಿ ಅಧ್ಯಕ್ಷ ಆನೆಪುರ ಹನುಮಂತಪ್ಪ, ಮಾಸ್ತಿ ಕಾಂಗ್ರೆಸ್ ಅಧ್ಯಕ್ಷ ವಿಜಯ ನರಸಿಂಹ, ಕೆ ಪಿ ಸಿ ಸಿ ಸದಸ್ಯ ಪ್ರದೀಪ್ ರೆಡ್ಡಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎ ರಾಜಪ್ಪ, ಸದಸ್ಯರಾದ ಸಂಸ್ಥೆಯ ಅಧ್ಯಕ್ಷ ಎಂ ಎಸ್ ಕೇಶವ ಮೂರ್ತಿ, ಮಾರಿಕಾಂಭ ದೇವಾಲಯ ಟ್ರಸ್ಟ್ ಅಧ್ಯಕ್ಷ ಪಿ ವೆಂಕಟೇಶ್ ಇನ್ನಿತರರು ಹಾಜರಿದ್ದರು.

Share this article