ಕೃಷಿ ಮತ್ತು ತೋಟಗಾರಿಕೆ ಕಾಲೇಜಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ,
ಕನ್ನಡಪ್ರಭ ವಾರ್ತೆ, ಮೂಡಿಗೆರೆಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಮತ್ತು ಬೆಳೆಗಾರರು ತತ್ತರಿಸುತ್ತಿದ್ದಾರೆ. ಮಳೆ ಕೈಕೊಟ್ಟು ಬೆಳೆ ಕೈ ಸಿಗದೇ ಅನ್ನದಾತ ಆರ್ಥಿಕ ಹೊಡೆತಕ್ಕೆ ಸಿಲುಕಿ ಕಂಗೆಟ್ಟಿದ್ದಾನೆ. ಆದರೆ ಈ ಕೋಕೋ ಎಂಬ ಬೆಳೆ ನೀರು, ಗೊಬ್ಬರ ವಿಲ್ಲದೇ, ಸಾವಯವದಲ್ಲಿ ವಿವಿಧ ಬೆಳೆ ಬೆಳೆದು ಯಶಸ್ಸು ಕಾಣಲು ಸಾಧ್ಯ ಎಂದು ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್ ಹೇಳಿದರು.
ಮೂಡಿಗೆರೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಗೋಡಂಬಿ ಮತ್ತು ಕೋಕೋ ಅಭೀವೃದ್ಧಿ ನಿರ್ದೆಶನಾಲಯದ ಸಹಯೋಗದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಾವಯವದಲ್ಲಿ ಕೋಕೋ ಬೆಳೆಯುವುದರೊಂದಿಗೆ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು ಎಂದರು.ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ, ವಿಜ್ಞಾನಿಗಳು ತಿಳಿಸಿದ ರೀತಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆ ದಲ್ಲಿ ಅಧಿಕ ಲಾಭ ಪಡೆಯಬಹುದು. ಈ ಹಿಂದೆಯೂ ಮಲೆನಾಡಿನಲ್ಲಿ ಕೋಕೋ ಬೆಳೆ ಹೇರಳವಾಗಿ ಬೆಳೆಯುತ್ತಿದ್ದರು. ಆದರೆ, ಮಾಹಿತಿ ಕೊರತೆ ಕಾರಣ ಇಂದು ಕೋಕೋ ಕಾಣದಂತಾಗಿದೆ. ವಿಜ್ಞಾನಿಗಳು ರೈತರಲ್ಲಿ ಕೋಕೋ ಬಗ್ಗೆ ಅರಿವು ಮೂಡಿಸುವ ಮೂಲಕ ಮಿಶ್ರ ಬೆಳೆಗಳ ನಡುವೆ ಕೋಕೋ ಬೆಳೆ ಬಗ್ಗೆ ಮಾಹಿತಿ ನೀಡುತ್ತಿದ್ದು ಇದರ ಉಪಯೋಗ ಪ್ರತಿ ಯೊಬ್ಬರು ಪಡೆದುಕೊಳ್ಳಬೇಕೆಂದು ಹೇಳಿದರು.
ಕೃಷಿಕ ಗೌತವಳ್ಳಿ ಜಿ.ಎಂ. ಲಕ್ಷ್ಮಣಗೌಡ ಮಾತನಾಡಿ, ಕೋಕೋ ಬೆಳೆ ಬೆಳೆಯಲು ಕಾರ್ಮಿಕರ ಕೊರತೆ ಎದುರಾಗುವುದಿಲ್ಲ. ಕೋಕೋ ಬೆಳೆಯನ್ನು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುವುದರಿಂದ ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಇನ್ನು ಕೋಕೋಗೆ ನೀರು ಅಗತ್ಯವಿಲ್ಲ, ಸಾವಯವ ಗೊಬ್ಬರ ಬಳಸಿ ಒಂದು ಎಕರೆಯಲ್ಲಿ ಸುಮಾರು 2.50 ಕ್ವಿಂಟಾಲ್ ವರೆಗೆ ಕೋಕೋ ಬೆಳೆಯಬಹುದು. ಕೋಕೋ ದಟ್ಟವಾದ ಎಲೆಗಳನ್ನು ಬಿಡುವುದರಿಂದ ಎಲೆ ಉದುರಿ ಅಡಕೆ ಗಿಡಗಳಿಗೆ ಅದೇ ಸಾವಯವ ಗೊಬ್ಬರ ಆಗಿ ವರದಾನ ಆಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ ಸಂಶೋಧನಾ ನಿರ್ದೇಶಕ ಡಾ. ಎ.ಟಿ. ಕೃಷ್ಣಮೂರ್ತಿ ಮಾತನಾಡಿ, ಕೋಕೋ ವಿಶೇಷ ನಿರ್ವಹಣೆಯಿಲ್ಲದೆ ಬದುಕುವ ಬೆಳೆ. ಅದಕ್ಕೆ ಪ್ರತ್ಯೇಕ ನೀರು, ಗೊಬ್ಬರ ಅಗತ್ಯ ಇಲ್ಲವೇ ಇಲ್ಲ. ಗಿಡದ ತುಂಬಾ ಎಲೆ ಗಳನ್ನು ಹೊಂದಿ ಸೊಂಪಾಗಿ ಬೆಳೆಯುವುದರಿಂದ ತೋಟದಲ್ಲಿ ಕಳೆ ಕಡಿಮೆಯಾಗುತ್ತದೆ. ಹೆಚ್ಚುವರಿ ಕೊಂಬೆಗಳನ್ನು ಸವರುವು ದರಿಂದ ತೋಟಕ್ಕೆ ಸೊಪ್ಪು ದೊರಕುತ್ತದೆ. ಉದುರಿದ ಎಲೆಗಳು ಕೂಡ ಇದೇ ರೀತಿಯ ಅನುಕೂಲ ವೊದಗಿಸುತ್ತವೆ. ಯಾವುದೇ ರೀತಿ ರೋಗ, ಕಾಟಗಳಿಲ್ಲ. ಕೆಲವು ಕಡೆ ಕಾಟಗಳು ಇವೆಯಾದರೂ ನಗಣ್ಯ ಎಂದರು.ವೇದಿಕೆಯಲ್ಲಿ ಕ್ಷೇತ್ರಾಧ್ಯಕ್ಷರಾದ ಡಾ. ಸಿ.ಕೆ. ಪ್ರಮೀಳಾ, ಮೀನುಗಾರಿಕಾ ಇಲಾಖೆ ಡಾ.ಎ.ವಿ. ಸ್ವಾಮಿ, ಕೃಷಿ ವಿಸ್ತರಣೆ ಸಹಾಯಕ ಪ್ರಾಧ್ಯಾಪಕ ಡಾ.ಸುನಿತಾ, ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜೆ.ಸಿ. ಸಂಧ್ಯಾ, ರೈತ ಮಹಿಳೆ ವನಶ್ರೀ, ಪ್ರಗತಿಪರ ರೈತರುಗಳಾದ ಕೃಷಿಕ ಬೀರೂರಿನ ಲೋಕೇಶಪ್ಪ, ಚಿಕ್ಕಮಗಳೂರು ಕುನ್ನಾಳಿನ ರೈತ ಕುಮಾರ ಸ್ವಾಮಿ, ಪೂರ್ಣೆಶ್ ಉಪಸ್ಥಿತರಿದ್ದರು.
27 ಕೆಸಿಕೆಎಂ 1ಮೂಡಿಗೆರೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಗುರುವಾರ ನಡೆದ ಗೋಡಂಬಿ ಮತ್ತು ಕೋಕೋ ಬೆಳೆ ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಡಾ. ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದರು.