ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಹೊಳಲ್ಕೆರೆ ತಾಲೂಕಿನಿಂದ ಕಳೆದ ಎರಡು ದಿನಗಳಿಂದ ಪಾದಯಾತ್ರೆ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದ್ದ ಐದುನೂರಕ್ಕೂ ಹೆಚ್ಚು ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಒನಕೆ ಓಬವ್ವ ಪ್ರತಿಮೆ ಮುಂಭಾಗ ಸಾರ್ವಜನಿಕ ಸಭೆ ನಡೆಸಿ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಭದ್ರಾ ಮೇಲ್ದಂಡೆ ಕಾಮಗಾರಿ ಕುಂಟುತ್ತಾ ಸಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿವೆ. ತುಂಗಾ ಜಲಾಶಯದಿಂದ ಭದ್ರಾ ಜಲಾಶಯದವರೆಗೆ ಕಾಮಗಾರಿ ಅರೆ ಬರೆ ಸಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಬೇಕು. ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ಯೋಜನೆಯಡಿ ನೀರು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆಂದು ಚಿತ್ರದುರ್ಗಕ್ಕೆ ಆಗಮಿಸಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು ಅನುದಾನ ಕೊಡುವುದಾಗಿ ಘೋಷಿಸಿದ್ದರು. 2022-23 ರ ಕೇಂದ್ರ ಬಜೆಟ್ ನಲ್ಲಿ ಕೂಡಾ ಘೋಷಣೆ ಮಾಡಲಾಗಿತ್ತು. ಇದುರೆಗೂ ಅನುದಾನ ನೀಡದೆ ವಂಚಿಸಲಾಗಿದೆ ಎಂದು ದೂರಿದರು.
ರೈತ ಸಂಘದ ಹಿರಿಯ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಕಾಮಗಾರಿ ನೆನೆಗುದಿಗೆ ಬಿದ್ದು ನಾಲ್ಕಾರು ವರ್ಷಗಳಾಗಿವೆ. 200 ಕೋಟಿ ರು ಬಿಡುಗಡೆ ಕೂಡಾ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಕೂಡಾ ಅನುದಾನ ನೀಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನತೆ ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾಲ್ಗೊಳ್ಳದ ಕೋದಂಡರಾಮಯ್ಯ, ಬಂಜಗೆರೆ
ಪಾದಯಾತ್ರೆ ಆರಂಭವಾಗುವ ಮುನ್ನಾದಿನ ಹೇಳಿಕೆ ನೀಡಿ ರೈತರು ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಪಾದಯಾತ್ರೆ ಆರಂಭವಾದ ಗುರುವಾರವೇ ಪಾಲ್ಗೊಳ್ಳುವರೆಂದು ಹೇಳಲಾಗಿತ್ತು. ಆದರೆ ಕೆಲ ಪದಾಧಿಕಾರಿಗಳು ಹೊಳಲ್ಕೆರೆಯಿಂದ ಆರಂಭಗೊಂಡ ಜಾಥಾಗೆ ಶುಕ್ರವಾರ ಜಾನುಕೊಂಡದ ಬಳಿ ಸ್ವಾಗತಿಸುವ ಕೆಲಸ ಮಾತ್ರ ಮಾಡಿ ಬೆಂಬಲವ ಸಾರ್ಥಕ ಪಡಿಸಿದರು.