ಕೆರೆ ಒತ್ತುವರಿ ತೆರವುಗೊಳಿಸಲು ರೈತ ಸಂಘದ ಆಗ್ರಹ

KannadaprabhaNewsNetwork | Published : May 24, 2025 1:00 AM
ತಾಲೂಕಿನ ಸಿ.ಕೆ.ಪುರ ಗ್ರಾಮದ ಮುದುಕನ ಕುಂಟೆ ಕೆರೆ ಅತಿಕ್ರಮಣವಾಗಿದ್ದು ಪ್ರಭಾವಿಗಳನ್ನು ಅಲ್ಲಿಂದ ಹೊಡೆದೋಡಿಸಿ ಜನ ಜಾನುವಾರುಗಳಿಗೆ ನೀರಿನ ಮೂಲವಾಗಿರುವ ಕೆರೆಯನ್ನು ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Follow Us

ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ಸಿ.ಕೆ.ಪುರ ಗ್ರಾಮದ ಮುದುಕನ ಕುಂಟೆ ಕೆರೆ ಅತಿಕ್ರಮಣವಾಗಿದ್ದು ಪ್ರಭಾವಿಗಳನ್ನು ಅಲ್ಲಿಂದ ಹೊಡೆದೋಡಿಸಿ ಜನ ಜಾನುವಾರುಗಳಿಗೆ ನೀರಿನ ಮೂಲವಾಗಿರುವ ಕೆರೆಯನ್ನು ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ತಹಸೀಲ್ದಾರ್‌ ವರದರಾಜು ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮುಖಂಡರು,

ಸ್ಥಳೀಯ ಕೆಲ ಪ್ರಭಾವಿಗಳು ಆಕ್ರಮಿಸಿಕೊಂಡ ಪರಿಣಾಮ ಜಾನುವಾರುಗಳ ಕುಡಿಯುವ ನೀರಿಗೆ ಅಭಾವ ಹಾಗೂ ರೈತರ ಕೊಳವೆ ಬಾವಿಯ ಅಂತರ್ಜಲ ಕುಸಿತಗೊಂಡಿದೆ. ಸ್ಥ‍ಳ ಪರಿಶೀಲನೆ ನಡೆಸಿ ಕೂಡಲೇ ಒತ್ತವರಿ ತೆರವುಗೊಳಿಸುವಂತೆ ಆಗ್ರಹಿಸಿದರು. ಮುದುಕನ ಕುಂಟೆ 12 ಎಕರೆ 04ಗುಂಟೆ ವ್ಯಾಪ್ತಿ ಒಳಗೊಂಡಿದ್ದು, ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗುವ ಕಾರಣ ಜನ, ಜಾನುವಾರು, ಪಕ್ಷಿಗಳ ಕುಡಿಯುವ ನೀರಿನ ಮೂಲವಾಗಿದೆ. ಸುತ್ತಮುತ್ತಲ ರೈತರ ಜಮೀನುಗಳ ಪಂಪ್‌ಸೆಟ್‌ ಕೊಳವೆಬಾವಿಗಳ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿದೆ. ರೈತರ ಜಮೀನುಗಳ ನೀರಾವರಿ ಬೆಳೆಗಳ ಸಂರಕ್ಷಣೆಗೆ ಅನುಕೂಲವಾಗಿದೆ. ಆದರೆ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಶಾಮೀಲಾಗಿ ದಾಖಲೆ ತಿದ್ದಿದ ಪರಿಣಾಮ ಮುದುಕನಕುಂಟೆಯ ಬಹುತೇಕ ಪ್ರ‍ಭಾವಿಗಳ ಪಾಲಾಗಿದೆ. ಪರಿಣಾಮ ಜಾನುವಾರುಗಳ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಕಾನೂನು ರೀತ್ಯಾ ಕೆರೆ ಒತ್ತುವರಿ ಅತಿಕ್ರಮಣದಿಂದ ಕೂಡಿದೆ. ಈ ಬಗ್ಗೆ ಮೂಲ ದಾಖಲೆ ಸಮೇತ ಮಾಹಿತಿ ನೀಡಿ ಕೆರೆಯ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದರೂ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಅರೋಪಿಸಿದರು.

ತಾಲೂಕಿನ ಸಿ.ಕೆ.ಪುರ ಗ್ರಾಪಂ ವ್ಯಾಪ್ತಿಯ ಉದ್ದಂಡಪ್ಪನ ಪಾಳ್ಯ ಕಿಲಾರ್ಲಹಳ್ಳಿ, ಹನುಮಯ್ಯನಪಾಳ್ಯ, ಚಿತ್ತಗಾನಹಳ್ಳಿ, ಕನ್ನಮೆಡಿ,ದ್ಯಾವಯ್ಯನ ಪಾಳ್ಯ ದೇವರ ಹಟ್ಟಿ ಮುಂತಾದ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ಈ ಕೆರೆ ಹೆಚ್ಚು ಅನುಕೂಲವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮೂಲ ದಾಖಲೆ ಪರಿಶೀಲಿಸಿ ಅಕ್ರಮ ಕೆರೆ ಒತ್ತುವರಿಯನ್ನು ಈ ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿರೈತ ಸಂಘದಿಂದ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ಅವರು ಎಚ್ಚರಿಸಿದರು.

ತಾಲೂಕು ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ. ಬ್ಯಾಡನೂರು ಶಿವು, ಹನುಮಂತರಾಯಪ್ಪ, ಕೃಷ್ಣಮೂರ್ತಿ, ರಾಮಾಂಜಿನಪ್ಪ, ನರಸಣ್ಣ, ಚಿತ್ತಯ್ಯ, ಗೋವಿಂದ, ರಮೇಶ್‌ ವೀರಭದ್ರಪ್ಪ, ದುರ್ಗಪ್ಪ ,ಸಂಜೀವಪ್ಪ ,ನಾಗಪ್ಪ ,ಹನುಮಂತರಾಯಪ್ಪ, ರಾಮಾಂಜಿನಪ್ಪ, ತಿಮ್ಮಣ್ಣ, ಲಕ್ಷ್ಮ ನಾಯ್ಕ ,ಜಂಪಣ್ಣ, ಸಿದ್ದಪ್ಪ,ಶ್ರೀ ರಾಮಪ್ಪ ಇತರರಿದ್ದರು.