ಕನಕಪುರ : ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವುದರಿಂದ ಜಿಲ್ಲೆಯ ರೈತರ ಬದುಕು ಹಸನಾಗದು. ರೈತರ ತುಂಡು ಭೂಮಿಗಳು ಕೈಗಾರಿಕೋದ್ಯಮಿಗಳ ಹಾಗೂ ಬಂಡವಾಳಶಾಹಿಗಳ ಪಾಲಾಗಿ ರೈತರು ಬಂಡವಾಳಶಾಹಿಗಳ ಗುಲಾಮರಾಗಬೇಕಾಗುತ್ತದೆ ಎಂದು ರಾಜ್ಯ ರೈತಸಂಘದ ಸಂಚಾಲಕ ಚೀಲೂರು ಮುನಿರಾಜು ಎಚ್ಚರಿಸಿದರು.
ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸ್ಥಳೀಯ ಶಾಸಕರೇ ರಾಜ್ಯ ಉಪ ಮಂತ್ರಿಗಳಾಗಿದ್ದಾರೆ, ತಾಲೂಕಿನ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮಿತಿಮೀರಿದೆ. ಮಳೆಗಾಲ ಪ್ರಾರಂಭವಾಗಿದ್ದರೂ ರೈತ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸರ್ಕಾರಿ ಸವಲತ್ತುಗಳು ಬಂದಿಲ್ಲ, ಸಮಸ್ಯೆಗಳು ಬಗೆಹರಿಸುವುದು ಬಿಟ್ಟು ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ತಾಲೂಕು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಮನಗರ ಜಿಲ್ಲೆಯನ್ನೇ ಅಭಿವೃದ್ಧಿ ಮಾಡದವರು, ಬೆಂಗಳೂರು ದಕ್ಷಿಣ ಜಿಲ್ಲೆಯ ಎಂದು ಮರುನಾಮಕರಣ ಮಾಡಿ ಅಭಿವೃದ್ಧಿ ಮಾಡುವುದು ಕನಸಿನ ಮಾತು. ಸ್ವಂತ ತಾಲೂಕಿನಲ್ಲಿಯೇ ಪ್ರತಿನಿಧಿಸುತ್ತಿರುವ ಡಿ.ಕೆ.ಶಿವಕುಮಾರ್ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಜಿಲ್ಲೆಯ ಜನರ ಅನುಕೂಲಕ್ಕಾಗಿ ಬೃಹತ್ ಆಸ್ಪತ್ರೆ ದಾನವಾಗಿ ಕಟ್ಟಿಸಿಕೊಟ್ಟಿದ್ದಾರೆ. ಈ ಆಸ್ಪತ್ರೆಗೆ ಕನಿಷ್ಠ ಸವಲತ್ತು, ತಜ್ಞ ವೈದ್ಯರು, ಸಿಬ್ಬಂದಿ ಇಲ್ಲದೇ ರೋಗಿಗಳು ನರಳುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಹೀಗೆ ನೂರಾರು ಸಮಸ್ಯೆಗಳಿಂದ ತಾಲೂಕಿನ ಜನ ಪರಿತಪಿಸುತ್ತಿದ್ದು ಮೊದಲು ಇದರ ಕಡೆಗೆ ಗಮನಹರಿಸಲಿ ಎಂದು ಹೇಳಿದರು.
ಕಳೆದ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದು ಕಾಡಂಚಿನ ರೈತರು ಹೊಲಗಳಲ್ಲಿ ಕೃಷಿ ಚಟುವಟಿಕೆ ಮಾಡಲು ಹೆದರುತ್ತಿದ್ದು, ಕಾಡುಪ್ರಾಣಿಗಳ ದಾಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ತಾಲೂಕಿನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲಾಗದೆ ಹೆಸರು ಬದಲಾಯಿಸಲು ಹೊರಟಿರುವುದು ಸರಿಯಲ್ಲ ಎಂದರು.
ತಹಸೀಲ್ದಾರ್ ಡಾ.ಸ್ಮಿತಾರಾಮ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕನ್ನಡ ಪರ ಸಂಘಟನೆಯ ಭಾಸ್ಕರ್, ಪುಟ್ಟಲಿಂಗಯ್ಯ, ರೈತ ಸಂಘದ ಮುಖಂಡರಾದ ಪಡುವಣಗೆರೆ ಕುಮಾರ್, ಪುಟ್ಟಮಾದೇಗೌಡ, ಮರಿಯಪ್ಪ, ಮಲ್ಲೇಶ್, ರವಿ, ಬಸವರಾಜು, ರಂಗಪ್ಪ, ಸಿದ್ದರಾಜು, ಕೆಂಪಣ್ಣ ಇತರರು ಇದ್ದರು.