ಹಾನಗಲ್ಲ: ಮಾರನಬೀಡ, ಮಾಸನಕಟ್ಟಿ, ಬೈಚವಳ್ಳಿ, ಕೊಪ್ಪರಸಿಕೊಪ್ಪ ಗ್ರಾಮ ಪಂಚಾಯಿತಿಗಳಿಗೆ ಶುಂಠಿ ಬೆಳೆವಿಮೆ ತಡೆಹಿಡಿದಿರುವುದು, ಹಾನಗಲ್ಲ ತಾಲೂಕಿಗೆ ಈವರೆಗೂ ಮಾವು, ಅಡಕೆ ಬೆಳೆವಿಮೆ ಘೋಷಣೆಯಾಗದಿರುವುದನ್ನು ಖಂಡಿಸಿ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಇಲ್ಲಿನ ತೋಟಗಾರಿಕೆ ಇಲಾಖೆಗೆ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದರು.
ಅಧಿಕಾರಿಗಳ ದಾರಿ ತಪ್ಪಿಸುವ ಹೇಳಿಕೆಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬೆಳೆವಿಮೆ ಸಕಾಲಿಕವಾಗಿ ಲಭ್ಯವಾಗದೇ ರೈತ ಸಂಘ ಪದೇ ಪದೇ ಪ್ರತಿಭಟನೆ, ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಅನಿವಾರ್ಯತೆಯನ್ನು ತಂದೊಡ್ಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಳೆವಿಮೆಗೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರದ ವಂತಿಗೆ ವಿಳಂಬವೇ ಕಾರಣ ಎಂದು ತಿಳಿದಿದೆ. ಅಲ್ಲದೆ ಸಕಾಲಿಕವಾಗಿ ಬೆಳೆವಿಮೆ ಬಿಡುಗಡೆಗೊಳಿಸುವಲ್ಲಿ ತಾಲೂಕಿನ ಶಾಸಕರು, ಈ ಕ್ಷೇತ್ರದ ಸಂಸದರು ಬಿಡಿಕಾಳಿನಷ್ಟು ಕಾಳಜಿವಹಿಸದಿರುವುದು ಖೇದದ ಸಂಗತಿ. ಬೆಳೆವಿಮೆ ವಿಷಯದಲ್ಲಿ ಅವರ ಹೇಳಿಕೆಗಳು ಹಾಸ್ಯಾಸ್ಪದವಾಗಿ ಕಾಣುತ್ತಿವೆ. ೯ ತಿಂಗಳು ತಡವಾಗಿದ್ದರೂ ಕೂಡ ಇನ್ನೂ ಕಾಯಿರಿ ಎಂದು ಸೂಚಿಸುವ ಜನಪ್ರತಿನಿಧಿಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಬೆಳೆ ವಿಮೆ ಕಂತು ತುಂಬುವ ದಿನಾಂಕ ನಿಗದಿಗೊಳಿಸುವಂತೆ ಬೆಳೆವಿಮೆ ಪರಿಹಾರ ನೀಡುವ ದಿನಾಂಕವನ್ನೂ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಮುಖಂಡ ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, ರೈತರನ್ನು ಸುಲಿಗೆ ಮಾಡುತ್ತಿರುವ ಸರ್ಕಾರಗಳ ದ್ವಂದ್ವ ನೀತಿ ರೈತರಿಗೆ ಅರ್ಥವಾಗುತ್ತಿಲ್ಲ. ರೈತರ ಒಗ್ಗಟ್ಟು ಮಾತ್ರ ನಮ್ಮ ಬೇಡಿಕೆಗೆ ಸರಿಯಾದ ದಾರಿ ತೋರಿಸಬಲ್ಲದು. ನಾವು ಯಾರಿಗೂ ಅಂಜುವ ಅಗತ್ಯವಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು ಯಾರ ಮೇಲು ನಾವು ಹೊರೆಯಾಗಿಲ್ಲ. ರೈತರು ಹೊರೆ ಹೊತ್ತು ಅನ್ನ ಹಾಕುತ್ತಾರೆಯೇ ಹೊರತು, ಯಾರಿಗೂ ಹೊರೆಯಾಗುವುದಿಲ್ಲ. ಸರ್ಕಾರಗಳ ನಿರ್ಲಕ್ಷ್ಯ ರೈತರನ್ನು ಇನ್ನೂ ಹತಾಶಗೊಳಿಸುವ ಉದ್ದೇಶಕ್ಕಾಗಿಯೇ ಇದೆ ಎಂದು ಎಚ್ಚರಿಸಿದರು.
ನಂತರ ಎರಡು ದಿನಗಳ ಕಾಲ ಕಾಯುವ ನಿರ್ಧಾರದೊಂದಿಗೆ ರೈತ ಸಂಘದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶೋಕ ಸಂಶಿ, ರಾಜು ದಾನಪ್ಪನವರ, ಶಂಭು ಮಣಕಟ್ಟಿ, ರವಿ ನೆರಕಿಮನಿ, ಷಣ್ಮುಖ ಅಂದಲಗಿ, ಸೋಮಣ್ಣ ಜಡೆಗೊಂಡರ, ರಾಜೇಂದ್ರ ಘಾಳಪೂಜಿ, ನಾಗರಾಜ ಹಿತ್ಲವರ, ಪ್ರಮೋದ ಪಾಟೀಲ ಮೊದಲಾದವರು ಇದ್ದರು.