ಕನ್ನಡಪ್ರಭ ವಾರ್ತೆ ದಾವಣಗೆರೆಬಗರ್ ಹುಕುಂ ಸಾಗುವಳಿ ಪತ್ರ ನೀಡುವಂತೆ, ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಜೋಡಣೆ ಕೈಬಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ರೈತರು ಪ್ರತಿಭಟಿಸಿದರು. ಹರಿಹರ ತಾಲೂಕಿನಿಂದ ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಧಾವಿಸಿದ ರೈತರು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲೂಕುಗಳ ರೈತರು ಫಾರಂ-57 ಅರ್ಜಿಗಳನ್ನು ಸಲ್ಲಿಸಿದ್ದು, ಭೂಮಿಯನ್ನು ಸುಮಾರು 25-30 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಅಂತಹ ಸಾಗುವಳಿದಾರ ರೈತರಿಗೆ ತಕ್ಷಣವೇ ಬಗರ್ ಹುಕುಂ ಸಾಗುವಳಿ ಪತ್ರವನ್ನು ನೀಡಬೇಕು ಎಂದು ಒತ್ತಾಯಿಸಿದರು.ರೈತರ ಬಗರ್ ಹುಕುಂ ಸಾಗುವಳಿ ಪತ್ರ ನೀಡುವಂತೆ ಒತ್ತಾಯಿಸಿ ರೈತ ಸಂಘ ಅನೇಕ ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ಸಾಗುವಳಿ ಪತ್ರ ನೀಡಲು ವಿಳಂಬ ಮಾಡಬಾರದು. ರೈತ ಕುಟುಂಬಗಳಿಗೆ ಬಗರ್ ಹುಕುಂ ಸಾಗುವಳಿಯನ್ನು ನೀಡಬೇಕೆಂಬುದು ದಶಕಗಳ ಬೇಡಿಕೆಯಾಗಿದ್ದು ,ತಕ್ಷಣವೇ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಇಲಾಖೆಯಿಂದ ಕೃಷಿ ಪಂಪ್‌ಸೆಟ್ ಗಳಿಗೆ ಮೀಟರ್ ಅಳವಡಿಕೆ ಹಾಗೂ ಆಧಾರ್ ಕಾರ್ಡ್ ಜೋಡಣೆ ಮಾಡುವ ಹುನ್ನಾರವನ್ನು ಸರ್ಕಾರ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಿಸುವ ಮೂಲಕ ವಿದ್ಯುತ್ ಖಾಸಗೀಕರಣಗೊಳಿಸುವ ಹುನ್ನಾರ ಇಲ್ಲಿ ನಿಲ್ಲಿಸಬೇಕು ಎಂದು ಎಚ್ಚರಿಸಿದರು.ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸಾಲ ಸೋಲ ಮಾಡಿ, ಬೆಳೆ ಬೆಳೆದಿದ್ದ ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ರೈತರಿಗೆ ಸೂಕ್ತ ಪರಿಹಾರವನ್ನು ತುರ್ತಾಗಿ ನೀಡುವ ಮೂಲಕ ಅನ್ನದಾತರ ನೆರವಿಗೆ ಸರ್ಕಾರ ಧಾವಿಸಬೇಕು. ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಕರ್ನಾಟಕ ರಾಜ್ಯ ಸರ್ಕಾರವೇ ಖರೀದಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಅವರು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಲ್ಲಿ ರೈತರನ್ನು ಹಾಗೂ ಸಾರ್ವಜನಿಕರನ್ನು ಐದಾರು ವರ್ಷಗಳವರೆಗೆ ವಿನಾಕಾರಣ ಅಲೆದಾಡಿಸಲಾಗುತ್ತಿದೆ. ಇದರಿಂದ ರೈತರು ಹತಾಶೆಗೊಳಗಾಗಿ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಭೂ ಮಾಪನ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿ ರೈತರ ಕೆಲಸವನ್ನು ತ್ವರಿತವಾಗಿ, ಕಾಲಮಿತಿಯಲ್ಲಿ ಮಾಡಿಕೊಡದೇ, ವಿನಾಕಾರಣ ಅಲೆದಾಡಿಸುತ್ತಾ ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿ, ಸಿಬ್ಭಂದಿಗಳನ್ನು ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದರು.
ಉಭಯ ಇಲಾಖೆಗಳಿಗೆ ಸಮರ್ಥ ಮತ್ತು ಸೂಕ್ತ ಅಧಿಕಾರಿ, ಸಿಬ್ಭಂದಿಗಳನ್ನು ನೇಮಿಸುವ ಮೂಲಕ ಉಭಯ ಇಲಾಖೆಗಳಲ್ಲಿ ರೈತರು, ಜನ ಸಾಮಾನ್ಯರ ಕೆಲಸ, ಕಾರ್ಯಗಳು ಸುಲಲಿತವಾಗಿ ನಡೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಬಲ್ಲೂರು ರವಿಕುಮಾರ ಆಗ್ರಹಿಸಿದರು.ರೈತ ಸಂಘದ ಮುಖಂಡರಾದ ಪಿ. ಮಂಜುನಾಥ ಕೋಗಳಿ, ಮಾಯಕೊಂಡ ಅಶೋಕ, ಆರ್.ಎಚ್. ಪ್ರತಾಪ ಮಾಯಕೊಂಡ, ವಕೀಲ ಎಸ್. ಮಂಜುನಾಥ, ಮಿಯ್ಯಾಪುರ ತಿರುಮಲೇಶ, ಹೆಬ್ಬಾಳು ರಾಜಯೋಗಿ, ಜಯನಾಯ್ಕ, ದಶರಥರಾಜ, ಬಸವರಾಜಪ್ಪ ಮಲೆಬೆನ್ನೂರು, ಮಂಜುನಾಥ ಇತರರು ಇದ್ದರು.