ಹನೂರು: ತಾಲೂಕಿನಾದ್ಯಂತ ತೀವ್ರ ಬರಗಾಲದಿಂದ ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಹನೂರು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಆಡಳಿತ ಯಾವುದೇ ವಿಳಂಬ ಮಾಡದೆ ಎಲ್ಲ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಸೇರಿದಂತೆ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡು ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆಯ ವಾಸ್ತವ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಕ್ತಿವೇಲು, ಪ್ರಧಾನ ಕಾರ್ಯದರ್ಶಿ ಗೋಪಾಲ್, ತಭಾಮಣಿ, ಪೂಂಗೂಡಿ, ವೇಲುಸ್ವಾಮಿ, ರಾಜುಗೌಡ, ಬಸವರಾಜು ಸೇರಿ ಸಂಘದ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.