ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಅ. 20ರಂದು ವಿಧಾನಸೌಧ ಮುತ್ತಿಗೆ ಹಾಗೂ ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಹೇಳಿದರು.ನಗರದ ಪಿಡಬ್ಲ್ಯೂಡಿ ಗೆಸ್ಟ್ ಹೌಸಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಆ. 15ರಂದು ದೇಶಕ್ಕೆ ಸ್ವತಂತ್ರ ಬಂದಿದೆ ಎಂದು ನಾವೆಲ್ಲರೂ ಸ್ವತಂತ್ರರು ಎಂದು ದೇಶವು ವಿಜೃಂಭಣೆಯಿಂದ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತದೆ. ಆದರೆ ರೈತರ ಪಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಈ ಕಾರಣ ರೈತರಿಗೆ ಸ್ವತಂತ್ರ ಬಂದಿಲ್ಲ ಎಂದರು.
ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ 4,500 ನಿಗದಿ ಮಾಡಬೇಕು. ಕಟಾವು ಮತ್ತು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸಬೇಕು. ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯ ಮೋಸ ತಪ್ಪಿಸಲು ರೈತರು ಹಾಗೂ ತಜ್ಞರ ಸಮಿತಿ ರಚಿಸಬೇಕು. ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಬೇಕು. ಕಳೆದ ಸಾಲಿನ 950 ಕೋಟಿ ರು. ರೈತರಿಗೆ ಬಾಕಿ ನೀಡಬೇಕು ಎಂದರು.ರಾಜ್ಯದಲ್ಲಿ ರಸಗೊಬ್ಬರದ ಪೂರೈಕೆ ರಾಜಕಾರಣವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಲ್ಲಿ ರಾಜಕೀಯ ಮಾಡುತ್ತವೆ, ರಸಗೊಬ್ಬರದ ಸಮರ್ಪಕ ಪೂರೈಕೆಯು ಸರ್ಕಾರಗಳ ಜವಾಬ್ದಾರಿಯಾಗಿದ್ದು ಯಾವುದೇ ಗೊಂದಲವಿಲ್ಲದೆ ರಸಗೊಬ್ಬರ ಪೂರೈಕೆಯ ಕ್ರಮ ಕೈಗೊಳ್ಳಬೇಕು ಹಾಗೂ ಕೃತಕ ಆಭವ ಸೃಷ್ಟಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿಗದಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡುವವರ ಮೇಲೆ ಜಿಲ್ಲಾಡಳಿತ ನಿಗ ವಹಿಸಬೇಕು ಎಂದರು.
ರಾಜ್ಯದಲ್ಲಿ ವಿದ್ಯುತ್ ಖಾಸಗಿಕರಣ ಮಾಡಲು ಹುನ್ನಾರ ನಡೆಯುತ್ತಿದೆ. ಸ್ಮಾರ್ಟ್ ಮೀಟರ್ ಹಾಕುವ ಮೂಲಕ ವಿದ್ಯುತ್ ಖಾಸಗೀಕರಣ ಮಾಡಿ ಹಣ ವಸೂಲಿಗೆ ಸರ್ಕಾರಗಳು ಮುಂದಾಗುತ್ತಿವೆ. ಅಕ್ರಮ ಸಕ್ರಮ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟರೆ 24 ಗಂಟೆಯಲ್ಲಿ ಬದಲಾಯಿಸಲು ಕ್ರಮ ಕೈಗೊಳ್ಳಬೇಕು ಎಂದರು.ಮೇಕೆದಾಟು ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು. ಪ್ರತಿ ಲೀಟರ್ ಹಾಲಿಗೆ 55 ರುಪಾಯಿ ನಿಗದಿ ಮಾಡಬೇಕು ನಿಗದಿ ಮಾಡಬೇಕು. ಸುಮಾರು ಸಾವಿರ ಕೋಟಿ ರುಪಾಯಿ ಹಾಲಿನ ಪ್ರೋತ್ಸಾಹಧನದ ಬಾಕಿಯನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ರೈತರಿಗೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಆರಂಭ ಮಾಡಬೇಕು ಆದರೆ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಇದನ್ನು ತಕ್ಷಣ ಕೈಬಿಡಬೇಕು ಸರ್ಕಾರ ಎಂದರು.
ಭೂ ಸುಧಾರಣಾ ಕಾಯ್ದೆ ಎಪಿಎಂಸಿ ಕಾಯ್ದೆ ವಿದ್ಯುತ್ ಕಾಯ್ದೆಗಳನ್ನು ಖಾಸಗಿಕರಣ ಮಾಡುವುದನ್ನು ತಕ್ಷಣ ಕೈಬಿಡಬೇಕು. ಬ್ಯಾಂಕ್ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು. ಚಿನ್ನದ ಅಡಮಾನ ಸಾಲಕ್ಕೆ ಅಸಲು ಮತ್ತು ಬಡ್ಡಿ ಎರಡನ್ನು ಕೇಳುವುದನ್ನು ಕೈ ಬಿಟ್ಟು ಬಡ್ಡಿ ಸಂಗ್ರಹಿಸಿಕೊಂಡು ಸಾಲವನ್ನು ರಿನೀವಲ್ ಮಾಡಬೇಕು, ರೈತನ ಹೊಲದಲ್ಲಿನ ಬೆಳೆ ವಿಮೆ ನಿಗದಿ ಆಗಬೇಕು ವೈಯಕ್ತಿಕ ಬೆಳೆ ವಿಮೆ ಜಾರಿ ಆಗಬೇಕು ಎಂದರು. ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ವಿಶೇಷ ಡಿಪಿಆರ್ ತಯಾರಿಸಿ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿಯ ಹೆಸರಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರ ರೈತರನ್ನು ಪಾಲುದಾರರಾಗಿ ಮಾಡಿ ಅಭಿವೃದ್ಧಿಯಲ್ಲಿ ಬರುವ ಲಾಭವನ್ನು ರೈತರಿಗೆ ಹಂಚಬೇಕು ಎಂದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಚಾಮರಾಜನಗರ ತಾಲೂಕು ಅಧ್ಯಕ್ಷ ಸತೀಶ್, ಗುರುವಿನಪುರ ಚಂದ್ರಪ್ಪ, ಆನಂದ, ಅರಳಿ ಕಟ್ಟೆ ದೊರೆಸ್ವಾಮಿ, ಕಾಳಪ್ಪ ಸುರೇಶ್ ಹಾಜರಿದ್ದರು.-----17ಸಿಎಚ್ಎನ್52
ಚಾಮರಾಜನಗರದ ಪಿಡಬ್ಲ್ಯೂಡಿ ಗೆಸ್ಟ್ ಹೌಸಿನಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿದರು.