ಫೆ. 14ರಂದು ರೈತ ಸಂಘದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ

KannadaprabhaNewsNetwork |  
Published : Feb 10, 2026, 02:30 AM IST
ಹಾವೇರಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲೇ ರೈತ ಆತ್ಮಹತ್ಯೆ ಪ್ರಕರಣಗಳಿಗೆ ನಂಬರ್ ಒನ್ ಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ರೈತರ ಸಮಾಧಿ ಮೇಲೆ ಸಾಧನಾ ಸಮಾವೇಶ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ಫೆ. 14ರಂದು ರೈತ ಸಂಘದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗುವುದೆಂದು ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಹೇಳಿದರು.

ಹಾವೇರಿ:ರಾಜ್ಯದಲ್ಲೇ ರೈತ ಆತ್ಮಹತ್ಯೆ ಪ್ರಕರಣಗಳಿಗೆ ನಂಬರ್ ಒನ್ ಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ರೈತರ ಸಮಾಧಿ ಮೇಲೆ ಸಾಧನಾ ಸಮಾವೇಶ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ಫೆ. 14ರಂದು ರೈತ ಸಂಘದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗುವುದೆಂದು ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ನಡೆಯುತ್ತಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅದಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಬದಲಾಗಿ ಸರ್ಕಾರವೇ ರೈತರನ್ನು ಹತ್ಯೆ ಮಾಡುತ್ತಿದೆ. ಬೆಳೆದಂತಹ ಬೆಳೆಗೆ ಸರಿಯಾದ ದರಗಳು ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತ ಜೀವಂತವಾಗಿ ಇದ್ದಾಗ ಸರಿಯಾಗಿ ಬಿತ್ತನೆ ಬೀಜ, ರಸಗೊಬ್ಬರ, ಬೆಳೆ ವಿಮೆ ಪರಿಹಾರ, ವಿದ್ಯುತ್ ಕೊಡದೆ ರೈತರ ಜೀವನದ ಜತೆ ಚೆಲ್ಲಾಟವಾಡುವ ರಾಜ್ಯ ಸರ್ಕಾರ ಅದೇ ರೈತ ಸತ್ತ ಮೇಲೂ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಿದ್ದು, ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಯವರನ್ನು ಇಂಚಿಂಚು ಕೊಲ್ಲಲು ತೀರ್ಮಾನ ಮಾಡಿದೆ ಎಂದು ದೂರಿದರು.ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಬ್ಯಾಡಗಿ ತಾಲೂಕು ಹೊಸ ಶಿಡೇನೂರ ಗ್ರಾಮದ ರೈತನ ಕುಟುಂಬಸ್ಥರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ರೈತ ಸಾವನ್ನಪ್ಪಿ 3 ವರ್ಷ ಗತಿಸಿದರೂ ಪರಿಹಾರ ನೀಡಲು ಸಾಧ್ಯವಾಗದ ಸಿದ್ದರಾಮಯ್ಯ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ. ಕೂಡಲೇ ಇಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು. ರೈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ಆರೋಪಿಸಿದರು.ಬ್ಯಾಡಗಿ ತಾಲೂಕು ಶೀಡೆನೂರ ರೈತ ನಾಗರಾಜ ಬಿದರಿ 2022ರಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ರೈತನ ಕುಟುಂಬದವರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಕೂಡಾ ಇರಲಿಲ್ಲ, ಆದರೂ ರೈತ ಮೃತಪಟ್ಟ ದಿನದಿಂದ 3 ತಿಂಗಳ ಬಳಿಕ ಅರ್ಜಿ ಸಲ್ಲಿಸಿದ್ದನ್ನೇ ನೆಪವಾಗಿಟ್ಟುಕೊಂಡು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ಒಟ್ಟು 30 ಪ್ರಕರಣ ಹಾಗೂ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸರ್ಕಾರದ ಮುಂದಿವೆ. ಕೂಡಲೇ ರೈತ ಆತ್ಮಹತ್ಯೆ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸಮರ್ಪಕ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಫೆ.13ಕ್ಕೆ ನಂಜುಂಡಸ್ವಾಮಿ ಜನ್ಮದಿನ: ಕರ್ನಾಟಕದ ರೈತ ಚಳವಳಿಯ ಪಿತಾಮಹ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ಜನ್ಮದಿನವನ್ನು ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಚೇರಿಯಲ್ಲಿ ಫೆ.13ರಂದು ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತಿದೆ. ತಾಲೂಕಿನ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕಾಧ್ಯಕ್ಷಪ್ಪ ದಿಳ್ಳೆಪ್ಪ ಮಣ್ಣೂರ ತಿಳಿಸಿದರು.ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ತಾಲೂಕು ಗೌರವಾಧ್ಯಕ್ಷ ಸುರೇಶ ಚಲವಾದಿ, ಜಿಲ್ಲಾ ಸಂಚಾಲಕ ಗುಡ್ಡನಗೌಡ ಪ್ಯಾಟಿಗೌಡ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯ ನಿರಂತರ ಧ್ಯಾನ, ತಪ ಮಾಡಲಿ: ಡಾ. ಚನ್ನವೀರ ಶ್ರೀಗಳು
ಆಧಾರ್ ಸೀಡಿಂಗ್ ಶೇ. 85.62ರಷ್ಟು ಸಾಧನೆ: ಸಚಿವ ಕೃಷ್ಣ ಭೈರೇಗೌಡ