ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರಾಜ್ಯ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರ ಭೂಮಿ ರೈತರ ತಾಯಿ ಇದ್ದಹಾಗೆ, ಅದನ್ನು ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳಬೇಕು ಎಂದು ಹೇಳಿದರು. 140 ಕೋಟಿ ಜನರಿಗೆ ಅನ್ನಕೊಡುವ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಸರ್ಕಾರ ಹಾಗು ಅದರ ಅಂಗ ಸಂಸ್ಥೆಗಳೇ ನಾಶವಾಗುತ್ತವೆ ಎಂದು ಅಕ್ರೋಶದ ಮಾತುಗಳನ್ನಾಡಿದರು. ರೈತ ದ್ರೋಹಿಗಳನ್ನು ರೈತರು ಯಾವತ್ತೂ ಕ್ಷಮಿಸಬಾರದು. ರೈತರು ತಮ್ಮ ಹಕ್ಕನ್ನು ಪ್ರತಿಪಾದಿಸದಿದ್ದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ. ಸಿ ಆ್ಯಂಡ್ ಡಿ ಹೆಸರಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಪ್ರಯತ್ನಿಸಿದರು ಉಗ್ರಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.ಕಳೆದ ಒಂದೂವರೆ ವರ್ಷಗಳಿಂದ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು, ಮುಖ್ಯಮಂತ್ರಿಗಳು, ಅರಣ್ಯ ಹಾಗೂ ಕಂದಾಯ ಇಲಾಖಾ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆಯಲಾಗಿದೆ. ಆದರೆ ಅರಣ್ಯ ಇಲಾಖೆಯವರು ರೈತರ ಗಮನಕ್ಕೆ ತರದೆ ಸರ್ವೆ ಮಾಡುತ್ತ ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು. ಡಿಸೆಂಬರ್ ತಿಂಗಳಿನಿಂದ ನಿರಂತರ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.ಸರ್ಕಾರದ ವಿರುದ್ಧ ಧಿಕ್ಕಾರ:
ಅಕ್ರಮ ಒತ್ತುವರಿ ಹೆಸರಿನಲ್ಲಿ ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರ ಕಾಫಿ ತೋಟವನ್ನು ನಾಶಗೊಳಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ವೇದಿಕೆಯಲ್ಲಿ ನಾಣಿಯಪ್ಪ ಕುಟುಂಬಸ್ಥರು ತಮ್ಮ ಆಸ್ತಿ ದಾಖಲೆಯನ್ನು ಸುಟ್ಟು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ರೈತ ಮುಖಂಡರಾದ ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್, ಕೂತಿ ದಿವಾಕರ್ ಮತ್ತಿತರ ರೈತ ಮುಖಂಡರು ಇದ್ದರು.