18 ರಂದು ಬಣ್ಣಾರಿ ಕಾರ್ಖಾನೆ ಎದುರು ರೈತರ ಜಾಗೃತಿ ಹೋರಾಟ

KannadaprabhaNewsNetwork | Published : Jul 16, 2024 12:38 AM

ಸಾರಾಂಶ

2022- 23ನೇ ಸಾಲಿನ ವರ್ಷದ ಕಬ್ಬಿನ ಎಫ್.ಆರ್.ಪಿ ನಿಗದಿ ಮಾಡಿರುವ ಹೆಚ್ಚುವರಿ ದರ 150 ರೂ. ಕೊಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಬಣ್ಣಾರಿ ಸಕ್ಕರೆ ಕಾರ್ಖಾನೆಯು ರೈತರನ್ನು ವಂಚಿಸುತ್ತಿರುವ ಬಗ್ಗೆ ಕಬ್ಬು ಬೆಳೆಗಾರರಿಗೆ ಜಾಗೃತಿ ಮೂಡಿಸಲು ಜು.18 ರಂದು ಬಣ್ಣಾರಿ ಕಾರ್ಖಾನೆ ಎದುರು ರೈತರ ಜಾಗೃತಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ವಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ಕೂಡಲೇ ಹಂಚಿಕೆ ಮಾಡಬೇಕು. 2022- 23ನೇ ಸಾಲಿನ ವರ್ಷದ ಕಬ್ಬಿನ ಎಫ್.ಆರ್.ಪಿ ನಿಗದಿ ಮಾಡಿರುವ ಹೆಚ್ಚುವರಿ ದರ 150 ರೂ. ಕೊಡಬೇಕು ಎಂದು ಆಗ್ರಹಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪತ್ರವನ್ನು ಡಿಜಿಟಲೀಕರಣ ಆ್ಯಪ್ ಮೂಲಕ ಬಿಡುಗಡೆ ಮಾಡಬೇಕು. ಕಳೆದ 6 ವರ್ಷಗಳಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನಗಳ ಲಾಭವಿಲ್ಲ ಎಂದು ತೋರಿಸಿ ವಂಚಿಸುತ್ತಿರುವುದರ ಬಗ್ಗೆ ತನಿಖೆಯಾಗಬೇಕು. ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಸರ್ಕಾರ ವತಿಯಿಂದ ಡಿಜಿಟಲ್ ತೂಕ ಯಂತ್ರ ನಿರ್ಮಿಸಡಬೇಕು ಎಂದು ಅವರು ಒತ್ತಾಯಿಸಿದರು.

ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸರ್ಕಾರ ಸೂಚನೆ ಮಾಡಿದ ದರಕ್ಕಿಂತ ಹೆಚ್ಚು ಕಡಿತ ಮಾಡಿ ರೈತರನ್ನು ಸುಲಿಗೆ ಮಾಡುತ್ತಿರುವುದು ನಿಲ್ಲಬೇಕು. ರೈತರ ಕಬ್ಬು ಕಾರ್ಖಾನೆ ತಲುಪಿದ ತಕ್ಷಣ ಕಬ್ಬನ್ನು ತೂಕ ಮಾಡಿ ರೈತರಿಗೆ ಎಸ್ಎಂಎಸ್ ಮೂಲಕ ತಿಳಿಸಬೇಕು. ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹಾನಿಯಾದಾಗ ಕಾರ್ಖಾನೆಯವರು ಕಬ್ಬಿನ ಹಣದಲ್ಲಿ ಶೇ.25 ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ, ಸರ್ಕಾರ ನಿಗದಿ ಮಾಡಿರುವ ಎಫ್.ಆರ್.ಪಿ ಹಣವನ್ನು ಪೂರ್ತಿ ಕೊಡಬೇಕು. ಕಬ್ಬು ಪೂರೈಕೆ ಮಾಡಿದ ಎಲ್ಲಾ ರೈತರಿಗೂ ಕಡ್ಡಾಯವಾಗಿ ಮೊಬೈಲ್ ಸಂದೇಶದ ಮೂಲಕ ಕಬ್ಬಿನ ಹಣ ಪಾವತಿ ಬಗ್ಗೆ ಬಿಲ್ ಗಳನ್ನು ರವಾನಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪದಾಧಿಕಾರಿಗಳಾದ ಮಾರ್ಬಳ್ಳಿ ನೀಲಕಂಠಪ್ಪ, ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಕುರುಬೂರು ಸಿದ್ದೇಶ್, ಮುಖಂಡರಾದ ಲಕ್ಷ್ಮೀಪುರ ವೆಂಕಟೇಶ್, ಪರಶಿವಮೂರ್ತಿ, ಕೆಂಡಗಣ್ಣಸ್ವಾಮಿ, ಸಾತಗಳ್ಳಿ ಬಸವರಾಜು, ಕಮಲಮ್ಮ, ಸಾಕಮ್ಮ, ಕುರಬೂರು ಪ್ರದೀಪ್, ಬನ್ನೂರು ಸೂರಿ, ಅಂಬಳೆ ಮಂಜುನಾಥ್, ಕೆ.ಜಿ. ಗುರುಸ್ವಾಮಿ, ಗೌರಿಶಂಕರ್, ಸುನಿಲ್ ಕುಮಾರ್, ಹೆಗ್ಗೂರು ರಂಗರಾಜು, ನಿಂಗರಾಜು, ಕಾಟೂರು ನಾಗೇಶ್, ವರಕೋಡು ಜಯರಾಮೇಗೌಡ, ಕುಳ್ಳೇಗೌಡ ಮೊದಲಾದಲರು ಇದ್ದರು.

Share this article