ಕನ್ನಡಪ್ರಭ ವಾರ್ತೆ ಮದ್ದೂರು
ಹೊಸ ಅವಿಷ್ಕಾರಗಳು ಹೆಚ್ಚು ನಡೆದಂತೆ ವಿಭಿನ್ನ ಯಂತ್ರೋಪಕರಣಗಳು ಸಿದ್ಧವಾಗಿ ರೈತರಿಗೆ ಹಲವು ರೀತಿಯ ಅನುಕೂಲವಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ತಾಲೂಕಿನ ಬೋರಾಪುರ ಗ್ರಾಮದಲ್ಲಿ ರೈತ ಬಸವರಾಜು ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಯಂತ್ರದ ಮೂಲಕ ಭತ್ತದ ನಾಟಿ ಮಾಡುವ ಕಾರ್ಯಕ್ಕೆ ಹಾಗೂ ಬೇಸಾಯ ವಿಷಯ ಕುರಿತು ಕಿಸಾನ್ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.
ಕೂಲಿ ಆಳುಗಳ ಸಮಸ್ಯೆಯಿಂದ ರೈತರಿಗೆ ಬೇಸಾಯಕ್ಕೆ ಸಮಸ್ಯೆಯಾಗಿದೆ. ನಾಟಿ ಮಾಡುವ ಯಂತ್ರದಿಂದ ರೈತರಿಗೆ ಒಂದು ರೀತಿಯಲ್ಲಿ ವರದಾನವಾಗಿದೆ. ಇದರಿಂದ ಕೂಲಿ ಕಾರ್ಮಿಕರ ಸಮಸ್ಯೆ ದೂರವಾಗುತ್ತದೆ. ಹೆಚ್ಚು ಬಂಡವಾಳದ ಸಮಸ್ಯೆ ಇಲ್ಲ. ಸರಿಯಾದ ಸಮಯಕ್ಕೆ ನಾಟಿ ಮಾಡಬಹುದು. ಹೆಚ್ಚು ಬಿತ್ತನೆ ಬೀಜದ ಅಗತ್ಯವಿಲ್ಲ. ಕೀಟ ಬಾಧೆ ಇರುವುದಿಲ್ಲ ಎಂದು ಹಲವು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.9 ಕಾರ್ಮಿಕರು ಮಾಡಬಹುದಾದ ನಾಟಿ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ. ದಿನಕ್ಕೆ 4 ಎಕರೆಯಲ್ಲಿ ನಾಟಿ ಮಾಡುವ ಸಾಮರ್ಥ್ಯ ಇದೆ. 3 ಗಂಟೆ ಅವಧಿಯಲ್ಲಿ 9 ಲೀಟರ್ ಡೀಸೆಲ್ ಬಳಸಿಕೊಂಡು ಒಂದು ಎಕರೆ ನಾಟಿ ಮಾಡಬಹುದು. ಗದ್ದೆಯಲ್ಲಿ ನೀರು ಕಡಿಮೆ ಇದ್ದರೆ ಯಂತ್ರ ಸಲೀಸಾಗಿ ಗದ್ದೆಯಲ್ಲಿ ನಾಟಿ ಮಾಡಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಮಾತನಾಡಿ, ಯಂತ್ರದ ಮೂಲಕ ಭತ್ತ ನಾಟಿಯನ್ನು ತಾಲೂಕಿನಲ್ಲಿ ಉತ್ತೇಜನ ನೀಡಲು ಕೃಷಿ ಇಲಾಖೆಯಿಂದ ಸಹಾಯ ಧನದಲ್ಲಿ ಲಘು ಪೋಷಕಾಂಶ ಮಿತ್ರಣ ಹಾಗೂ ಜಿಂಕ್ ಅಂಶಗಳನ್ನು ರೈತರಿಗೆ ನೀಡಲಾಗುತ್ತಿದೆ. ಮೇಲುಗೊಬ್ಬರ ಶೀಟನಾಶಕಗಳನ್ನು ಸಿಂಪರಣೆ ಮಾಡಲು ಡೋನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರೈತರು ಕಡಿಮೆ ಶ್ರಮದಿಂದ ಹೆಚ್ಚು ಫಸಲು ಹಾಗೂ ಆದಾಯ ಪಡೆಯಬಹುದು ಎಂದರು.ಇದೇ ವೇಳೆ ಯಂತ್ರದ ಮೂಲಕ ಭತ್ತದ ನಾಟಿ ಮಾಡಲು ಶಾಸಕ ಕೆ.ಎಂ.ಉದಯ್ ಅವರು ಬಿಳಿ ಷರ್ಟ್ ಮತ್ತು ಬಿಳಿ ಪಂಚೆ ತೊಟ್ಟು ಕೆಸರು ಗದ್ದೆಗೆ ಇಳಿದು ಯಂತ್ರದ ಮೂಲಕ ನಾಟಿ ಮಾಡಿದ್ದು ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಮುನಿಗೌಡ, ಸಾದೊಳಲು ಗ್ರಾಪಂ ಅಧ್ಯಕ್ಷೆ ಪದ್ಮ, ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಪ್ರಕಾಶ್, ಸಾದೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್, ಮುಖಂಡರಾದ ಬಿ.ಜೆ.ಮಹೇಶ್, ಬಸವರಾಜು, ರವಿಕುಮಾರ್, ತಿಮ್ಮೇಗೌಡ, ಅವಿನಾಶ್, ರಾಮಲಿಂಗಯ್ಯ, ಪಿಡಿಒ ಹೇಮಾ, ಕೃಷಿ ಅಧಿಕಾರಿಗಳಾದ ರೂಪಶ್ರೀ, ಕರುಣ, ತಾಂತ್ರಿಕ ವ್ಯವಸ್ಥಾಪಕ ಗಾವಾಸ್ಕರ್, ಆತ್ಮ ಸಿಬ್ಬಂದಿ ಕುಸುಮ ಸೇರಿದಂತೆ ಇತರರು ಇದ್ದರು.