ಕನ್ನಡಪ್ರಭ ವಾರ್ತೆ ಕಾಪು
ನಮ್ಮ ಪರಿಸರದಲ್ಲಿ ಬತ್ತದ ಕೃಷಿ ಕಡಿಮೆಯಾಗುತ್ತಿದೆ. ಯುವಪೀಳಿಗೆಯಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಮನಸ್ಥಿತಿ ಇದೆ. ಕಾಡುಪ್ರಾಣಿಗಳ ಉಪಟಳ ಜಾಸ್ತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕಡಿಮೆ ಶ್ರಮ ಮತ್ತು ಖರ್ಚಿನಲ್ಲಿ ಲಾಭದಾಯಕವಾಗಿ ಮಾಡಲು ಸಾಧ್ಯ ಎಂದು ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ನುಡಿದರು.ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕ ಸಂಘ ಉಡುಪಿ ಇದರ ಪಾಂಬೂರು ಘಟಕ ವತಿಯಿಂದ ಶಿರ್ವ ಸಮೀಪದ ಪಡುಬೆಳ್ಳೆ ಪಾಂಬೂರು ಕುರ್ಡಾಯಿ ಸ್ಯಾಮ್ಸ್ ಫಾರ್ಮ್‌ನಲ್ಲಿ "ವೈಜ್ಞಾನಿಕ ಬತ್ತದ ಬೇಸಾಯ ಕೃಷಿ ಮಾಹಿತಿ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸದೆ ಸಾವಯವ ಕ್ರಮದಲ್ಲಿ ಕೃಷಿ, ಪ್ರತಿಯೊಬ್ಬ ರೈತ ಮನೆಯಲ್ಲಿ ದೇಶೀಯ ದನಗಳ ಸಾಕಣೆ ಮತ್ತು ಪ್ರಯೋಜನ, ಗೊಬ್ಬರದ ರಕ್ಷಣೆ, ಬೀಜಗಳ ಆಯ್ಕೆ, ಸಂರಕ್ಷಣೆ, ನಾಟಿ ಪದ್ಧತಿ, ಬಿತ್ತನೆ, ಯಂತ್ರೋಪಕರಣಗಳ ಬಳಕೆ, ನೈಸರ್ಗಿಕ ಕೀಟನಾಶಕಗಳ ಬಳಕೆ ಇತ್ಯಾದಿ ಮಾಹಿತಿ ನೀಡಿ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ, ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಸ್ಯಾನ್ಸನ್ ನೊರೋನ್ಹಾ ಪಾಂಬೂರು ವಹಿಸಿದ್ದರು. ಸಮಾಜಸೇವಕ ಪಾಂಬೂರು ರಿಚಾರ್ಡ್ ದಾಂತಿ, ಶಿರ್ವ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಗ್ರೇಸಿ ಕರ್ಡೊಜಾ, ಸ್ಥಳೀಯರಾದ ಲೂಕಾಸ್ ಡಿಸೋಜಾ, ವಿಜಯ್ ಧೀರಜ್, ಲಕ್ಷ್ಮಣ ನಾಯಕ್, ನಿತ್ಯಾನಂದ ನಾಯಕ್ ಪಾಲಮೆ ಹಾಗೂ ಪರಿಸರದ ಕೃಷಿಕರು ಪಾಲ್ಗೊಂಡಿದ್ದರು.ಪ್ರಗತಿಪರ ಕೃಷಿಕ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಮೇಶ್ಚಂದ್ರ ನಾಯಕ್ ಪಂಜಿಮಾರು ನಿರೂಪಿಸಿ ಧನ್ಯವಾದವಿತ್ತರು.