ಯೂರಿಯಾ ಗೊಬ್ಬರಕ್ಕಾಗಿ ಗಜೇಂದ್ರಗಡದಲ್ಲಿ ಅಂಗಡಿಗೆ ಮುತ್ತಿಗೆ ಹಾಕಿದ ರೈತರು

KannadaprabhaNewsNetwork |  
Published : Jul 25, 2025, 12:33 AM IST
ಯೂರಿಯಾ ಗೊಬ್ಬರಕ್ಕಾಗಿ ಅಂಗಡಿಯೊಳಗೆ ನುಗ್ಗಿದ ರೈತರನ್ನು ಸಮಾಧಾನ ಮಾಡುತ್ತಿರುವ ಪೊಲೀಸ್‌ರು. | Kannada Prabha

ಸಾರಾಂಶ

ಯೂರಿಯಾ ಗೊಬ್ಬರಕ್ಕಾಗಿ ರೈತರು ಹಾಗೂ ರಸಗೊಬ್ಬರ ಅಂಗಡಿಗೆ ಮುತ್ತಿಗೆ ಹಾಕಿ ರಸಗೊಬ್ಬರ ಮಾರಾಟಗಾನೊಂದಿಗೆ ತೀವ್ರ ವಾಗ್ವಾದ ನಡೆದು ಅಂಗಡಿಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾದ ಘಟನೆ ಗುರುವಾರ ಗಜೇಂದ್ರಗಡ ಪಟ್ಟಣದ ಎಪಿಎಂಸಿ ಎದುರು ನಡೆದಿದೆ.

ಗಜೇಂದ್ರಗಡ: ಯೂರಿಯಾ ಗೊಬ್ಬರಕ್ಕಾಗಿ ರೈತರು ಹಾಗೂ ರಸಗೊಬ್ಬರ ಅಂಗಡಿಗೆ ಮುತ್ತಿಗೆ ಹಾಕಿ ರಸಗೊಬ್ಬರ ಮಾರಾಟಗಾನೊಂದಿಗೆ ತೀವ್ರ ವಾಗ್ವಾದ ನಡೆದು ಅಂಗಡಿಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾದ ಘಟನೆ ಗುರುವಾರ ಪಟ್ಟಣದ ಎಪಿಎಂಸಿ ಎದುರು ನಡೆದಿದೆ.

ಸ್ಥಳೀಯ ರೋಣ ರಸ್ತೆಯ ಎಪಿಎಂಸಿ ಎದುರಿನ ರಸಗೊಬ್ಬರ ಅಂಗಡಿಯ ಮುಂದೆ ಬೆಳಗ್ಗೆಯಿಂದಲೇ ನೂರಕ್ಕೂ ಅಧಿಕ ರೈತರು ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ₹ ೫೦೦ ಟಾನಿಕ್ ಹಾಗೂ ₹೩೫೦ ಯೂರಿಯಾ ಗೊಬ್ಬರಕ್ಕೆ ಕೊಡಬೇಕು ಎಂದು ರಸಗೊಬ್ಬರ ಮಾರಾಟಗಾರ ಹೇಳುತ್ತಿದ್ದಾರೆ ಎಂದು ಆರೋಪಿಸಿದಾಗ ರಸಗೊಬ್ಬರ ಮಾರಾಟಗಾರ ಹಾಗೂ ರೈತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ರಸಗೊಬ್ಬರ ಮಾರಾಟಗಾರ ಯೂರಿಯಾ ಗೊಬ್ಬರ ನಮ್ಮ ಅಂಗಡಿಯಲ್ಲಿಲ್ಲ, ಮಧ್ಯಾಹ್ನ ಬರುತ್ತದೆ. ಬಂದ ಮೇಲೆ ಕೊಡುತ್ತೇವೆ ಎಂದಾಗ ಮತ್ತಷ್ಟು ಆಕ್ರೋಶಗೊಂಡ ಕೆಲವು ರೈತರು ಅಂಗಡಿಯ ಬಾಗಿಲು ಹಾಕಲು ಮುಂದಾದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಂಗಡಿಕಾರ ಹಾಗೂ ರೈತರ ಅಹವಾಲು ಆಲಿಸಿದರು. ೧೦೦ ರೈತರಿಗೆ ಮಾತ್ರ ಯೂರಿಯಾ ಗೊಬ್ಬರವಿದೆ. ಮೊದಲು ಚೀಟಿ ಕೊಡುತ್ತೇನೆ. ಮಧ್ಯಾಹ್ನ ಯೂರಿಯಾ ಗೊಬ್ಬರ ಕೊಡುವುದಾಗಿ ರಸಗೊಬ್ಬರ ಮಾರಾಟಗಾರ ಹೇಳಿದರು. ಪೊಲೀಸರು ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ರೈತರಿಗೆ ಚೀಟಿ ಕೊಡಿಸಿದರು. ಆ ಬಳಿಕ ವಾತಾವರಣ ತಿಳಿಗೊಳಿಸಿದರು.

ಪಟ್ಟಣದ ಎಪಿಎಂಸಿ ಎದುರಿನ ರಸಗೊಬ್ಬರ ಮಾರಾಟ ಅಂಗಡಿಯಲ್ಲಿ ಉಂಟಾಗಿದ್ದ ಗೊಂದಲ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಅಂಗಡಿಯೊಳಗಿದ್ದ ಒಬ್ಬರು ಹೆಬ್ಬೆಟ್ಟು ನೀಡದೆ ಯೂರಿಯಾ ಗೊಬ್ಬರ ನೀಡಲು ಬರುವುದಿಲ್ಲ ಎಂದರೆ ಮತ್ತೊಬ್ಬ ೧೦೦ ಜನರಿಗೆ ಯೂರಿಯಾ ಗೊಬ್ಬರ ಕೊಡಲು ಬರುತ್ತದೆ. ಸರತಿ ಸಾಲಿನಲ್ಲಿ ನಿಲ್ಲಲು ತಿಳಿಸಿ ಎಂದರು. ಆಗ ಸಿಟ್ಟಾದ ಪೊಲೀಸ್ ಸಿಬ್ಬಂದಿ ಗೊಂದಲ ಮಾಡದೇ ಗೊಬ್ಬರ ಚೀಟಿ ಕೊಡಿ ಎಂದು ಸೂಚಿಸಿದರು.

ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಮುಗಿಸಿದ ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಎದುರಾಗಿದೆ. ರಸಗೊಬ್ಬರವನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರೆ ಪರವಾನಗಿ ರದ್ದು ಮಾಡುತ್ತೇವೆ ಎಂದು ಕೃಷಿ ಇಲಾಖೆಯ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಆರೋಪ ರೈತರಿಂದ ಕೇಳಿಬಂದಿದೆ.

ತಾಲೂಕಿನಲ್ಲಿ ಯೂರಿಯಾ ಕೊರತೆ ಇಲ್ಲ. ರಸಗೊಬ್ಬರ ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರೆ ಅಂಗಡಿ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಗಜೇಂದ್ರಗಡದಲ್ಲಿ ಪೊಲೀಸ್ ಭದ್ರತೆಯಲ್ಲಿ ಇಲಾಖೆ ಅಧಿಕಾರಿಗಳು ಚೀಟಿ ವ್ಯವಸ್ಥೆ ಮೂಲಕ ರೈತರಿಗೆ ಯೂರಿಯಾ ಗೊಬ್ಬರ ವಿತರಿಸಿದ್ದಾರೆ ಎಂದು ಕೃಷಿ ಅಧಿಕಾರಿ ಎಸ್.ಎಫ್. ತಹಸೀಲ್ದಾರ್ ಹೇಳಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ