ಸಿರುಗುಪ್ಪ: ನಗರದ ಟಿಎಪಿಸಿಎಂಎಸ್‌ನ ಜೋಳ ಖರೀದಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ನೂರಾರು ರೈತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರು ಜೋಳ ಮಾರಾಟ ಮಾಡಲು ಬಂದರೆ ಖರೀದಿ ಕೇಂದ್ರದ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಸರಿಯಾದ ಮಾಹಿತಿ ನೀಡುತ್ತಿಲ್ಲ. ನೋಂದಣಿ ಪ್ರಕಾರ ಖರೀದಿ ಮಾಡುತ್ತಿಲ್ಲ. ದೊಡ್ಡ ರೈತರು ಮತ್ತು ಸಣ್ಣ ರೈತರು ಎಂದು ತಾರತಮ್ಯ ಮಾಡುತ್ತಿದ್ದಾರೆ. ದೊಡ್ಡ ರೈತರ ಜೋಳವನ್ನು ಶೀಘ್ರವಾಗಿ ಖರೀದಿಗೆ ತೆಗೆದುಕೊಳ್ಳುತ್ತಾರೆ. ಸಣ್ಣ ರೈತರು ಮಾರಾಟಕ್ಕೆ ಬಂದರೆ ಅವರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ವೇಳೆ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕೀನಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಸರಿಪಡಿಸಿ ಕ್ರಮ ತೆಗೆದುಕೊಳ್ಳಬೇಕು. ನೋಂದಣಿ ಮಾಡಿಸಿದ ಪ್ರಕಾರ ಖರೀದಿ ಮಾಡಬೇಕು. ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಬೇಕು. ತ್ವರಿತವಾಗಿ ಖರೀದಿ ಮಾಡಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ಜೋಳ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಜೋಳ ಬೆಳೆದ ರೈತರಿಗೆ ಮಾರಾಟ ಮಾಡಲು ತೊಂದರೆಯಾಗಿದೆ. ಪ್ರತಿ ವಿಎಸ್‌ಎಸ್‌ಎನ್ ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು.
ಉಪ ನಿರ್ದೇಶಕಿ ಸಕೀನಾ ಮಾತನಾಡಿ, ಪ್ರತಿ ದಿನ 5 ಸಾವಿರ ಚೀಲ ಜೋಳವನ್ನು ಖರೀದಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ನೋಂದಣಿ ಮಾಡಿಸಿದ ಪ್ರಕಾರ ಖರೀದಿ ಮಾಡಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದೇನೆ. ರೈತರು ಒಟ್ಟಿಗೆ ಜೋಳ ಮಾರಾಟ ಮಾಡಲು ಬಂದಿರುವುದರಿಂದ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.