ಸಣಾಪುರ ಗ್ರಾಮದ ರೈತನ ಮಗಳು ರಾಜ್ಯಕ್ಕೆ 4ನೇ ರ‍್ಯಾಂಕ್

KannadaprabhaNewsNetwork |  
Published : May 03, 2025, 12:18 AM IST
ರಾಜ್ಯಕ್ಕೆ 4ನೇ ಸ್ಥಾನ ಪಡೆದ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದ ಹಳೆಗೌಡ್ರು ನಂದಿತಾ ಗೆ ಪೋಷಕರು ಸಿಹಿ ತಿನಿಸಿ ಸಂತಸ ವ್ಯಕ್ತ ಪಡಿಸಿದರು.  | Kannada Prabha

ಸಾರಾಂಶ

ಕಂಪ್ಲಿ ಪಟ್ಟಣದ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿನಿ ಹಳೆಗೌಡ್ರು ನಂದಿತಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ

ಕಂಪ್ಲಿ: ಪಟ್ಟಣದ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿನಿ ಹಳೆಗೌಡ್ರು ನಂದಿತಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇದೇ ಮೊದಲ ಬಾರಿಗೆ ಕಂಪ್ಲಿ ತಾಲೂಕಿನ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಗಳಿಸಿದ್ದು, ತಾಲೂಕಿನ ಕೀರ್ತಿ ಹೆಚ್ಚಿಸಿದೆ.

625ಕ್ಕೆ 622 ಅಂಕ: ತಾಲೂಕಿನ ನಂ. 3 ಸಣಾಪುರ ಗ್ರಾಮದ ರೈತ ದಂಪತಿ ಹಳೆಗೌಡ್ರು ಉಮೇಶ್, ಹಳೆಗೌಡ್ರು ಸವಿತಾ ಅವರ ಮಗಳಾದ ಎಚ್. ನಂದಿತಾ ಕನ್ನಡ ವಿಷಯದಲ್ಲಿ 100, ಗಣಿತ 100, ಸಮಾಜ ವಿಜ್ಞಾನ 100, ಹಿಂದಿ 100, ಇಂಗ್ಲಿಷ್ 123, ವಿಜ್ಞಾನ 99 ಅಂಕ ಪಡೆದು ಒಟ್ಟಾರೆ 622 ಅಂಕ ಗಳಿಸಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ತಾಲೂಕಿನ ಗಣ್ಯರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಶಿಕ್ಷಕರ ಮಾರ್ಗದರ್ಶನ: ಶಾಲೆಯಲ್ಲಿನ ಪ್ರಾಚಾರ್ಯರು ಹಾಗೂ ಶಿಕ್ಷಕರು ನೀಡುವ ಉತ್ತಮ ಮಾರ್ಗದರ್ಶನ ನಮ್ಮಲ್ಲಿ ಓದುವ ಹವ್ಯಾಸ ಹೆಚ್ಚಿಸುತ್ತಿತ್ತು. ಗುಣಮಟ್ಟದ ಪಾಠ ಮಾಡುವ ಜತೆ ಜತೆಗೆ ಓದುವುದು, ಬರೆಯುವುದು ಸೇರಿ ಪರೀಕ್ಷೆಗೆ ಬೇಕಾಗುವ ಎಲ್ಲ ರೀತಿಯ ಪೂರ್ವ ತಯಾರಿಗಳ ಬಗ್ಗೆ ಹಾಗೂ ಅಂಕ ಗಳಿಸುವ ಉತ್ತಮ ವಿಧಾನದ ಬಗ್ಗೆ ತಿಳಿಸಿಕೊಡುತ್ತಿದ್ದರು. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೂ ಸತತ ವಿದ್ಯಾಭ್ಯಾಸದಲ್ಲೇ ತೊಡಗಿಕೊಳ್ಳಲು ಶಿಕ್ಷಕರು ಹಾಗೂ ಪೋಷಕರು ನೀಡಿದ ಮಾರ್ಗದರ್ಶನ ನಾನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಯಿತು ಎನ್ನುತ್ತಾಳೆ ವಿದ್ಯಾರ್ಥಿನಿ ಎಚ್. ನಂದಿತಾ. ಡೆಂಟಿಸ್ಟ್‌ ಆಗುವ ಕನಸು ಹೊತ್ತಿದ್ದು, ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದಳು.

ನಮ್ಮ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿ ಎಚ್. ನಂದಿತಾ ಅವರ ಪರಿಶ್ರಮದಿಂದ ಈ ಫಲಿತಾಂಶ ಲಭಿಸಿದೆ. ಇದೆ ಮೊದಲ ಬಾರಿ ಕಂಪ್ಲಿ ತಾಲೂಕಿನ ವಿದ್ಯಾರ್ಥಿನಿಗೆ ರಾಜ್ಯದಲ್ಲಿ 4ನೇ ಸ್ಥಾನ ದೊರೆತಿದ್ದು, ಅದು ನಮ್ಮ ಶಾಲೆಯ ವಿದ್ಯಾರ್ಥಿನಿ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತೇವೆ ಎಂದು ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ ಪ್ರಾಚಾರ್ಯ ನಾಗೇಶ್ವರ್ ರಾವ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''