ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ರವರು ಶೀಘ್ರದಲ್ಲೇ ಭೈರಮಂಗಲದಿಂದ ಪಾದಯಾತ್ರೆ ನಡೆಸೋಣ. ಊರಿಗೆ ಎರಡು ಜನ ಸಮಿತಿಗೆ ಹೆಸರು ಕೊಡಬೇಕು ಎಂದು ಹೇಳಿದಾಗ ಸಭೆಯಲ್ಲಿ ಹಾಜರಿದ್ದವರು ಬೆಂಬಲ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ರಚನೆ :ಹೋರಾಟವನ್ನು ಪಕ್ಷಾತೀತವಾಗಿ ಹಾಗೂ ರಾಜಕೀಯ ರಹಿತವಾಗಿ ಮುನ್ನಡೆಸಲು ಜಿಬಿಡಿಎ ವ್ಯಾಪ್ತಿಗೆ ಸೇರಿಸಿರುವ ಪ್ರತಿ ಗ್ರಾಮಗಳಿಂದ ತಲಾ ಮೂವರನ್ನು ಒಳಗೊಂಡ ಹೋರಾಟ ಸಮಿತಿಯನ್ನು ರಚಿಸಲು ಮುಖಂಡರು ನಿರ್ಧರಿಸಿದರು. ಸಮಿತಿಯಲ್ಲಿ ಪ್ರತಿ ಹಂತದ ಸ್ವರೂಪ ಹೇಗಿರಬೇಕೆಂಬುದನ್ನು ಸಮಿತಿಯಲ್ಲಿ ಚರ್ಚಿಸಿ ಒಮ್ಮತದಿಂದ ಅಂಗೀಕರಿಸಿ ಮುಂದುವರಿಯಲು ತೀರ್ಮಾನಿಸಿದರು.
ಹೊಸೂರಿನ ಎಚ್.ಸಿ.ಆನಂದ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಇದ್ದರೆ ನಮ್ಮ ಭೂಮಿ ನಮಗೆ ಉಳಿಯುತ್ತದೆ. ನಮ್ಮ ನಡುವೆ ಒಡಕುಂಟಾದರೆ ನಮ್ಮ ಭೂಮಿ ಕೈ ತಪ್ಪಲಿದೆ. ಕಡೆಗೆ ನಾವು ಬೀದಿ ಪಾಲಾಗಲಿದ್ದೇವೆ. ಅಂಬೇಡ್ಕರ್ ತೋರಿಸಿರುವ ಕಾನೂನಾತ್ಮಕ ಹೋರಾಟದ ಹಾದಿ ಹಿಡಿದು ನಮ್ಮ ಭೂಮಿ ಉಳಿಸಿಕೊಳ್ಳೋಣ ಎಂದು ಹೇಳಿದರು.
ಮುಖಂಡ ಇಟ್ಟಮಡು ಗೋಪಾಲ್ ಮಾತನಾಡಿ, ಹೋರಾಟದ ದಿಕ್ಕು ತಪ್ಪಿಸಲು ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಅದರ ಬಗ್ಗೆ ಎಚ್ವರಿಕೆ ವಹಿಸೋಣ. ಮೋಸ ಮಾಡುವವರನ್ನು ಹಿಮ್ಮೆಟ್ಟಿಸೋಣ. ಇಡೀ ಬಿಡದಿ ಹೋಬಳಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಜಿಬಿಡಿಎ ವ್ಯಾಪ್ತಿಗೆ ಸೇರಿರುವ ಭೈರಮಂಗಲ ಪಂಚಾಯಿತಿ ಗ್ರಾಮಗಳಾದ ಭೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಕಂಚುಗಾರನಹಳ್ಳಿ ಪಂಚಾಯಿತಿಯ ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲು, ಕೆಂಪಯ್ಯನಪಾಳ್ಯ, ಹೊಸೂರು, ಅರಾಳುಸಂದ್ರ, ಕೆ.ಜೆ. ಗೊಲ್ಲರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸದಸ್ಯರು, ರೈತ ಸಂಘದ ಮುಖಂಡರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗವಹಿಸಿದ್ದರು.
ಬಾಕ್ಸ್..........ಮಾತಿನ ಚಕಮಕಿ - ಪರಸ್ಪರ ತಳ್ಳಾಟ:ಸಭೆಯಲ್ಲಿ ಕೆಲ ಮುಖಂಡರ ಮಾತುಗಳಲ್ಲಿ ರಾಜಕೀಯ ಬೆರೆಸಿದ್ದರಿಂದ ಮಾತಿನ ಚಕಮಕಿ ನಡೆದು, ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಭೈರಮಂಗಲದ ಮುಖಂಡ ಸಿದ್ದರಾಜು , ‘ಹದಿನೆಂಟು ವರ್ಷವಾದರೂ ನಮ್ಮ ಭಾಗ ಕೆಂಪು ವಲಯದಲ್ಲಿದೆ. ಇದನ್ನು ತೆಗೆಸುವುದು ಯಾರು? ಈ ಅವಧಿಯಲ್ಲಿ ಮೂರೂ ಪಕ್ಷಗಳ ಸರ್ಕಾರ ಬಂದು ಹೋಗಿದೆ. ಹಿಂದೆ ನಾವು ಭೂ ಸ್ವಾಧೀನದ ಪರ ಇದ್ದು, ಈಗ ವಿರುದ್ಧ ನಿಲ್ಲಬೇಕಾದ ಸ್ಥಿತಿಯಲ್ಲಿದ್ದೇವೆ. ಈ ಸಭೆಯು ಭೂ ಸ್ವಾಧೀನದ ಪರವೋ ಅಥವಾ ವಿರುದ್ಧವೋ ಎಂಬುದು ಮೊದಲು ಸ್ಪಷ್ಟವಾಗಬೇಕು. ಹೋರಾಟಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿರಬೇಕು’ ಎಂದು ಕೆಲ ರಾಜಕೀಯ ನಾಯಕರ ಹೆಸರು ಪ್ರಸ್ತಾಪಿಸಿದರು.ಆಗ ಕೆಲವರು ಸಭೆಯಲ್ಲಿ ರಾಜಕೀಯ ತರಬೇಡಿ ಎಂದು ವೇದಿಕೆಗೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ, ಎರಡೂ ಕಡೆಯವರು ವೇದಿಕೆಯತ್ತ ಧಾವಿಸಿ ತಮ್ಮವರ ಪರ ಮಾತನಾಡಿದರು. ಈ ವೇಳೆ, ಪರಸ್ಪರ ತಳ್ಳಾಟ ನಡೆದು ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹಿರಿಯ ಮುಖಂಡರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ‘ಭೂ ಸ್ವಾಧೀನದ ವಿರುದ್ಧ ಈ ಸಭೆ ಆಯೋಜಿಸಲಾಗಿದೆ. ಆ ಆಶಯಕ್ಕೆ ಬದ್ಧರಾಗಿ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು, ಮುಂದಿನ ಹೋರಾಟಕ್ಕೆ ಸಲಹೆ ನೀಡಬೇಕು’ ಎಂದು ಸ್ಪಷ್ಟಪಡಿಸಿದ ಬಳಿಕ, ಸಭೆ ಮುಂದುವರಿಯಿತು.
-ವೆಂಕಟಾಚಲಪ್ಪ, ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ
4.ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿರುವ ಗ್ರಾಮಸ್ಥರು
5.ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು.