ಹೊಸ ದರದಲ್ಲಿ ಪರಿಹಾರ ನೀಡುವಂತೆ ರೈತರ ಆಗ್ರಹ

KannadaprabhaNewsNetwork | Published : Jul 26, 2024 1:36 AM

ಸಾರಾಂಶ

ಒಂದೆಡೆ ಭೂಮಿ ಕಳೆದುಕೊಂಡಿರುವ ರೈತರಿಗೆ ನಿಗದಿ ಮಾಡಿದಷ್ಟಾದರೂ ಪರಿಹಾರ ಇಂದಿಗೂ ಸಿಕ್ಕಿಲ್ಲ

ಶಿವಕುಮಾರ ಕುಷ್ಟಗಿ ಗದಗ

ರೈತರ ತ್ಯಾಗದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ರೈತರು ತೊಂದರೆಯಲ್ಲಿರುವಾಗ ಮಾತ್ರ ನೆರವಿಗೆ ಯಾರೂ ಬರುವದಿಲ್ಲ. 8 ವರ್ಷಗಳ ಹಿಂದೆ ಪಾಪನಾಶಿ ಬಳಿ ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದ್ದು, 2019 ರಲ್ಲಿಯೇ ಭೂಮಿ ಕೊಡಲು ಒಪ್ಪಿದ ರೈತರ ಜಮೀನುಗಳಿಗೆ ನಿಗದಿ ಮಾಡಿದ ದರ ಮಾತ್ರ ಅತ್ಯಂತ ಕಡಿಮೆಯಾಗಿದೆ.

ಒಂದೆಡೆ ಭೂಮಿ ಕಳೆದುಕೊಂಡಿರುವ ರೈತರಿಗೆ ನಿಗದಿ ಮಾಡಿದಷ್ಟಾದರೂ ಪರಿಹಾರ ಇಂದಿಗೂ ಸಿಕ್ಕಿಲ್ಲ, ಇನ್ನೊಂದೆಡೆ ಪ್ರಸ್ತುತ ಭೂಮಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಆ ದರಕ್ಕೆ ಭೂಮಿ ಬೇರೆಯವರಿಗೆ ಮಾರಾಟ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದ್ದು, ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

₹13.50 ಲಕ್ಷ ನಿಗದಿ: ಕೆರೆ ನಿರ್ಮಾಣಕ್ಕೆ ಅವಶ್ಯವೆಂದು ಗುರುತಿಸಲಾಗಿರುವ 10 ರೈತರ 48 ಎಕರೆ, 34 ಗುಂಟೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳದೇ 3-5-2019 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರೈತರಿಂದ ನೇರ ಖರೀದಿಗೆ ನಿರ್ಣಯ ಮಾಡಿ ಮುಗಿಸಿದ್ದರು. ಆದರೆ ಇದುವರೆಗೂ ಪರಿಹಾರ ನೀಡಿಲ್ಲ, ಆದರೆ ಕಳೆದ ಮೇ 30 ರಂದು ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಇತ್ತೀಚಿಗಿನ ಸ್ಥಿರಾಸ್ತಿ, ಮೌಲ್ಯ ಮತ್ತು ಪ್ರಸ್ತುತ ಮಾರ್ಗಸೂಚಿ ಬೆಲೆ ಪ್ರಕಾರ ಪ್ರತಿ ಎಕರೆಗೆ 12 ಲಕ್ಷ ರು. ಗಳಾಗುತ್ತವೆ. ಈ ಜಮೀನು ಗದಗ ನಗರದಿಂದ ಕೇವಲ 3 ಕಿಮೀ ಅಂತರದಲ್ಲಿರುವ ಹಿನ್ನೆಲೆಯಲ್ಲಿ ಎಕರೆಗೆ ₹ 13.50 ಲಕ್ಷ ನೀಡುವಂತೆ ವಿನಂತಿಸಿದ್ದಾರೆ. ಹಾಗೂ ಅಗತ್ಯ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

2019 ರಲ್ಲಿ ಕೆರೆ ನಿರ್ಮಾಣಕ್ಕಾಗಿ ₹13.50 ಲಕ್ಷಕ್ಕೆ ಪ್ರತಿ ಎಕರೆಯಂತೆ ಖರೀದಿಗೆ ರೈತರಿಂದ ಒಪ್ಪಿಗೆ ಪಡೆದಿದ್ದರು. ತಕ್ಷಣವೇ ರೈತರಿಗೆ ಪರಿಹಾರದ ಹಣ ನೀಡಿದ್ದರೆ ಯಾವುದೇ ಆಕ್ಷೇಪಣೆಗಳು ಬರುತ್ತಿರಲಿಲ್ಲ. ಆದರೆ 8 ವರ್ಷಗಳ ಕಾಲ ಯಾವುದೇ ರೀತಿಯ ಪರಿಹಾರ ನೀಡದೇ ಸತಾಯಿಸಿದ್ದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರೈತರು ಈಗ ನಮ್ಮ ಜಮೀನುಗಳ ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದೆ. ₹ 30 ಲಕ್ಷಕ್ಕೆ ಎಕರೆ ಮಾರಾಟವಾಗುತ್ತಿವೆ. ಅದಕ್ಕಾಗಿ ಸರ್ಕಾರ ಪ್ರಸ್ತುತ ದರ ನೀಡಿದರೆ ಮಾತ್ರ ಜಮೀನು ನೀಡಲು ಸಾಧ್ಯ.ಸರ್ಕಾರ ಈಗಲೂ ಅದೇ ಹಳೆಯ ಪರಿಹಾರದ ಮೊತ್ತ ನೀಡುವುದಾದರೆ ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎನ್ನುತ್ತಾರೆ ರೈತರು.

ಈಗಿನ ಮಾರುಕಟ್ಟೆ ಬೆಲೆ ನೀಡಿ: ಪಾಪನಾಶಿ ಗ್ರಾಮದ ಸರ್ವೇ ನಂಬರ್ 723 ವ್ಯಾಪ್ತಿಯ ಹಿಸ್ಸಾ ನಂಬರ್ ಗಳಾದ 16, 10, 9, 24, 17,7 (ಅಲ್ಪಭಾಗ) 13,19 (ಅಲ್ಪಭಾಗ), 12,11 ಸೇರಿದಂತೆ ಒಟ್ಟು 48 ಎಕರೆ 34 ಗುಂಟೆ ಜಮೀನು ಕೆರೆ ನಿರ್ಮಾಣಕ್ಕೆ ಅವಶ್ಯವೆಂದು ಗುರುತಿಸಲಾಗಿದೆ. ಇದೇ 10 ರೈತರಿಂದಲೇ ಈಗಿನ ಮಾರುಕಟ್ಟೆ ಬೆಲೆ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ.

ಕೆರೆ ನಿರ್ಮಾಣಕ್ಕಾಗಿ ಭೂಮಿ ಕೊಡುವ ರೈತರಿಗೆ ಪರಿಹಾರ ಕೊಡುವುದು ಸರ್ಕಾರದ ಹಂತದಲ್ಲಿ ಆಗಬೇಕಾಗಿದೆ. ಈ ಕುರಿತು ಗದಗ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಕೂಡಾ ರವಾನೆಯಾಗಿದೆ ಎಂದು ಕೆಯುಐಡಿಎಫ್ಸಿ ಹಿರಿಯ ಅಧಿಕಾರಿ ಎಸ್.ವಿ. ಭಜಣ್ಣವರ ಹೇಳಿದರು.

ಪ್ರಸ್ತುತ ನಮ್ಮ ಜಮೀನು ಎಕರೆಗೆ ₹30 ರಿಂದ ₹ 35 ಲಕ್ಷ ಬೆಲೆಬಾಳುತ್ತವೆ. ನಾವು ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಲಿಖಿತವಾಗಿ ಮನವಿ ಕೊಟ್ಟಿದ್ದೇವೆ. ಕೆರೆ ನಿರ್ಮಾಣಕ್ಕಾಗಿ 11 ಎಕರೆಗೂ ಹೆಚ್ಚಿನ ಅರಣ್ಯ ಹಾಗೂ ಗೋಮಾಳ ಜಮೀನು ಬಳಕೆ ಮಾಡಿಕೊಂಡು ಬೇಕಾ ಬಿಟ್ಟಿಯಾಗಿ ಅಗೆದಿದ್ದಾರೆ. ಜಿಲ್ಲಾಡಳಿತ, ನಗರಸಭೆ, ಕೆಯುಐಡಿಎಫ್ಸಿ ಸೇರಿದಂತೆ ಕೆಲ ಅಧಿಕಾರಿಗಳು ವ್ಯವಸ್ಥಿತವಾಗಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ ಎಂದು ರೈತರಾದ ಶ್ರೀನಿವಾಸ ದ್ಯಾವನೂರ ಹಾಗೂ ಇನ್ನುಳಿದ ಜಮೀನು ಕಳೆದುಕೊಂಡವರು ಒತ್ತಾಯಿಸಿದ್ದಾರೆ.

Share this article