ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ಅಳವಡಿಸಲು ರೈತರ ಪಟ್ಟು

KannadaprabhaNewsNetwork |  
Published : Jul 22, 2025, 01:15 AM IST
21ಎಚ್.ಎಲ್.ವೈ-1: ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸಲು ಜಿಲ್ಲಾಡಳಿತ ಮತ್ತು ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆಯ ಪ್ರತಿನಿಧಿಗಳ ಸಭೆ ನಡೆಸಿ ಸ್ಥಳ ಪರಿಶೀಲನೆ ಮಾಡಲಾಯಿತು.    | Kannada Prabha

ಸಾರಾಂಶ

ಪ್ರತಿಯಾಗಿ ಕಾರ್ಖಾನೆಯ ಪ್ರತಿನಿಧಿಗಳು ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಸ್ಥಾಪಿಸಲು ಸೂಕ್ತ ಸ್ಥಳ ಇಲ್ಲವೆಂದು ವಾದಿಸಿದರು.

ಹಳಿಯಾಳ: ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ರೈತರಿಗೆ ಕಾಣುವಂತೆ ತೂಕದಯಂತ್ರ ಅಳವಡಿಸುವ ಕುರಿತು ಸ್ಥಳ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ ಹಿನ್ನೆಲೆಯಲ್ಲಿ ಸೋಮವಾರ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಮುಂದಾಳತ್ವದಲ್ಲಿ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯ ಕಬ್ಬು ಬೆಳೆಗಾರರ ಪ್ರತಿನಿಧಿಗಳ ಮತ್ತು ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಯಿತು.

ಸುದೀರ್ಘವಾಗಿ ಸಭೆ ನಡೆದ ನಂತರ ಸ್ಥಳ ಪರಿಶೀಲಿಸಿದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಕೇನ್ ಯಾರ್ಡ್‌ ಮೊದಲ ಗೇಟ್ ಹೊರಗೆ ತೂಕದ ಯಂತ್ರ ಅಳವಡಿಸಲು ಸ್ಥಳ ಆಯ್ಕೆ ಮಾಡಿ, ತಮ್ಮ ನಿರ್ಧಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರು ಆಯ್ಕೆ ಮಾಡಿದ ಸ್ಥಳದ ಬಗ್ಗೆ ತನ್ನ ಸ್ಪಷ್ಟ ನಿಲುವು ಸ್ಪಷ್ಟಪಡಿಸಲು ನಿರಾಕರಿಸಿದೆ.

ಇನ್ನು ಕಬ್ಬು ಬೆಳೆಗಾರರ ಪ್ರತಿನಿಧಿಗಳು, ಕಾರ್ಖಾನೆಯ ಮುಂಭಾಗದಲ್ಲಿ ರೈತರಿಗೆ ಕಾಣುವಂತೆ ತೂಕದ ಯಂತ್ರ ಅಳವಡಿಸಲೇ ಬೇಕೆಂಬ ಬಹುವರ್ಷದ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಪಟ್ಟು ಹಿಡಿದರು. ಅದಕ್ಕೆ ಪ್ರತಿಯಾಗಿ ಕಾರ್ಖಾನೆಯ ಪ್ರತಿನಿಧಿಗಳು ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಸ್ಥಾಪಿಸಲು ಸೂಕ್ತ ಸ್ಥಳ ಇಲ್ಲವೆಂದು ವಾದಿಸಿದರು.

ಸಭೆಯಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ ಬೊಬಾಟೆ, ಈ ಹಿಂದೆಯಿದ್ದ ಕಾರ್ಖಾನೆಯ ಮುಖ್ಯಸ್ಥ ವೆಂಕಟರಾವ್ ಜಿಲ್ಲಾಧಿಕಾರಿ ಸಭೆಯಲ್ಲಿ ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಕಾರ್ಖಾನೆಯ ನಿಲುವು ಬದಲಾಗಿದೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ. ತೂಕದ ಯಂತ್ರ ಅಳವಡಿಸಲೇಬೇಕು. ಒಳಗಡೆಯಿರುವ ತೂಕದ ಯಂತ್ರದ ಬಗ್ಗೆ ನಮಗೆ ಸಮಾಧಾನವಿಲ್ಲ ಎಂದರು.

ಕಾರ್ಖಾನೆಯಯ ಪರವಾಗಿ ಮಾತನಾಡಿದ ಕಬ್ಬು ಕಟಾವು ಮತ್ತು ಸಾಗಾಟ ವಿಭಾಗದ ಮುಖ್ಯಸ್ಥ ರಮೇಶ ರೆಡ್ಡಿ ಈಗಾಗಲೇ ಕಾರ್ಖಾನೆಯಯ ಒಳಗಡೆ ತೂಕದ ಯಂತ್ರ ಅಳವಡಿಸಲಾಗಿದೆ, ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವುದರಿಂದ ಟ್ರ್ಯಾಪಿಕ್ ಸಮಸ್ಯೆ ಉದ್ಭವಿಸಲಿದೆ ಎಂದು ಹೇಳಿದಾಗ ಸಭೆಯಲ್ಲಿ ಬಾರಿ ಆಕ್ಷೇಪ ವಿರೋಧಗಳು ವ್ಯಕ್ತವಾದವು. ಬಳಿಕ ತೂಕದ ಯಂತ್ರಕ್ಕಾಗಿ ಸ್ಥಳ ಪರಿಶೀಲನೆ ನಡೆಸಬೇಕೆಂದು ಕಬ್ಬು ಬೆಳೆಗಾರರ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅಲ್ಲಿಯೇ ಮುಕ್ತಾಯಗೊಳಿಸಿ, ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಬ್ಬಿನ ಕೇನ್ ಯಾರ್ಡ್‌ ಮೊದಲ ಗೇಟ್ ಹೊರಗೆ ಸ್ಥಳ ಆಯ್ಕೆ ಮಾಡಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸಭೆಯ ನಿರ್ಧಾರ ಹಾಗೂ ಆಯ್ಕೆ ಮಾಡಿದ ಸ್ಥಳದ ವಿವರವನ್ನು ಜಿಲ್ಲಾಧಿಕಾರಿಗೆ ಕಳಿಸಲಾಗುವುದೆಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಹಳಿಯಾಳ ಎಪಿಎಂಸಿ ಕಾರ್ಯದರ್ಶಿ ಸುಮಿತ್ರಾ ಹೂವಣ್ಣನವರ, ಸಿಪಿಐ ಜಯಪಾಲ ಪಾಟೀಲ, ಪಿಎಸೈ ಬಸವರಾಜ ಮಬನೂರ, ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ ಬೆಳಗಾಂವಕರ, ನಾಗೇಂದ್ರ ಜಿವೋಜಿ, ಅಶೋಕ ಮೇಟಿ, ಸಾತೇರಿ ಗೋಡೆಮನಿ, ಪ್ರಕಾಶ ಪಾಕ್ರೆ, ರಾಮದಾಸ ಬೆಳಗಾಂವಕರ, ಧಾರವಾಡ ಜಿಲ್ಲಾ ಪ್ರಮುಖರಾದ ಪರಶುರಾಮ ಎತ್ತಿನಗುಡ್ಡ, ಉಳವಪ್ಪ ಬಳಿಗೇರ, ವಸಂತ ಡಾಕಪ್ಪನವರ, ಸಹದೇವ ಕುಂಬಾರ, ಯಲ್ಲಪ್ಪ ತಳವಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ