ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಚೂನಪ್ಪ ಪೂಜಾರಿ ಬಣದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಸ್ತೆತಡೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಚೂನಪ್ಪ ಪೂಜಾರಿ ಬಣದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಸ್ತೆತಡೆ ನಡೆಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರ ಬಳಿಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಸ್ತೆತಡೆ ನಡೆಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತಸಂಘದ ತಾಲೂಕು ಅಧ್ಯಕ್ಷ ಯಡಹುಂಡಿ ಪ್ರಭುಸ್ವಾಮಿ, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಶಿವರಾಜು, ಜವರನಾಯಕ, ಬಸವರಾಜು, ಮಣಿಕಂಠ, ಸಿದ್ದಯ್ಯ, ಹೊಣಕಾರನಾಯಕ ಸೇರಿ ಹಲವು ರೈತರು ಹಾಜರಿದ್ದರು.
33 ರೈತರ ಪ್ರತಿಭಟನೆಗೆ ನೂರಾರು ಪೊಲೀಸರು:
ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ಕಂಡು ಬಂದ ದೃಶ್ಯ ನೋಡಿದರೆ, ಇದು ರೈತರ ಪ್ರತಿಭಟನೆಯೋ ಅಥವಾ ಪೊಲೀಸರ ಪ್ರತಿಭಟನೆಯೋ ಎಂಬ ಅನುಮಾನ ಮೂಡುವಂತಿತ್ತು.
ಕಾರಣ, ಕಬ್ಬಿಗೆ ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಚೂನಪ್ಪ ಪೂಜಾರಿ ಬಣದ ರೈತಸಂಘದ ಕಾರ್ಯಕರ್ತರು ಕೇವಲ 33 ಮಂದಿ ಇದ್ದರೆ, ಅವರನ್ನು ನಿಯಂತ್ರಿಸಲು ಬಂದಿದ್ದ ಪೊಲೀಸರ ಸಂಖ್ಯೆ ನೂರರ ಗಡಿ ದಾಟಿತ್ತು.
ಗುಂಡ್ಲುಪೇಟೆ ಪಟ್ಟಣದಲ್ಲಿ ಮಂಗಳವಾರ ಪೊಲೀಸ್ ಬಂದೋಬಸ್ತ್ ನೋಡಿ ಸಾರ್ವಜನಿಕರು ‘ಇದೇನಪ್ಪಾ ಪೊಲೀಸರೇ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರಾ?’ ಎಂದು ವ್ಯಂಗ್ಯವಾಗಿ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಬಂದೋಬಸ್ತ್ ಹೇಗಿತ್ತು?
ಕೇವಲ 25-30 ರೈತರ ಪ್ರತಿಭಟನೆಗೆ ಎಎಸ್ಪಿ ಶಶಿಧರ್, ಡಿಎಸ್ಪಿ ಸ್ನೇಹರಾಜ್, 4 ಮಂದಿ ಪಿಐಗಳು, 6 ಮಂದಿ ಪಿಎಸ್ಐಗಳು, 20 ಮಂದಿ ಎಎಸ್ಐಗಳು, ಜೊತೆಗೆ ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ಪಡೆ, ಇದು ಸಾಲದು ಎಂಬಂತೆ ಕಮಾಂಡೋ ಪಡೆ ಸೇರಿ ಸುಮಾರು ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಾವಿರಾರು ರೈತರು ಜಮಾಯಿಸುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ಉಸ್ತುವಾರಿ ಪೊಲೀಸ್ ಅಧಿಕಾರಿಗಳು ಇಷ್ಟೊಂದು ದೊಡ್ಡ ಮಟ್ಟದ ಬಂದೋಬಸ್ತ್ ಕರೆಸಿದ್ದಾರೆಯೇ ಅಥವಾ ಅವರಿಗೆ ನಿಖರವಾದ ಗುಪ್ತಚರ ಮಾಹಿತಿಯೇ ಇರಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪ್ರತಿಭಟನಾಕಾರರ ಸಂಖ್ಯೆಗಿಂತ 5 ಪಟ್ಟು ಹೆಚ್ಚು ಪೊಲೀಸರನ್ನು ನಿಯೋಜಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ.ಈ ರೀತಿ ಮ್ಯಾನ್ ಪವರ್ ವ್ಯರ್ಥ ಮಾಡಿದ ಅಧಿಕಾರಿ ಯಾರು? ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಜನತೆಗೆ ಉತ್ತರ ನೀಡಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.