ನರಗುಂದ: ರಾಜ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ವಾಸುದೇವ ಮೇಟಿ ಆಗ್ರಹಿಸಿದರು.
2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಈರುಳ್ಳಿ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಕಬ್ಬು, ರಾಗಿ, ಹೆಸರು ಸೇರಿಂದತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿ ಪ್ರತಿ 1ಎಕರೆಗೆ ₹40 ಸಾವಿರ ಖರ್ಚು ಮಾಡಿದ್ದರು.
ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ವಿಪರೀತ ಮಳೆ ಸುರಿದು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ, ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಪರಿಕರಗಳನ್ನು ಮೊದಲಿನಂತೆ ವಿತರಿಸಬೇಕು. ಬೆಳೆಗೆ ಸರ್ಕಾರ ಕಾನೂನಾತ್ಮಕ ಬೆಲೆ ನಿಗದಿ ಮಾಡಬೇಕು. ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.ಕೃಷಿ ಸಚಿವ ಚಲುರಾಮಸ್ವಾಮಿ ಅವರು ಮನವಿ ಸ್ವೀಕರಿಸಿ, ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದೆಂದು ಭರವಸೆ ನೀಡಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ನಟರಾಜ ಸವದಿ, ನರಗುಂದ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ, ರೈತ ಮುಖಂಡರಾದ ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ನಾಗವೇಣಿ, ಇಬ್ರಾಹಿಂ, ಮೋಹಿನ ಇಬ್ರಾಹಿಂಪೂರ, ರೇಖಾ ಜಡಿ, ಮಂಜುಳಾ ಹಿರಯಪ್ಪನವರ, ಮಾರುತಿ ಲಕ್ಕುಂಡಿ, ಸೋಮಶೇಖರ ಕಣಗಲ್ಲ ಇತರರು ಇದ್ದರು.ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಗದಗ: ಪ.ಜಾ. ಮತ್ತು ಪ.ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಯ್ಕೆಯಾಗಿ ತರಬೇತಿಗೆ ಹಾಜರಾಗುವ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಗದಗ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ನಾತ್ತಕೋತ್ತರ ಅಂತಿಮ ವರ್ಷದ ಪದವಿಯ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ತರಬೇತಿಯ ಅವಧಿ ವೇಳೆ ಮಾಹೆಯಾನ ₹15,000 ಸ್ಟೈಫಂಡ್ ನೀಡಲಾಗುವುದು.ಆಸಕ್ತರು ಅರ್ಜಿಯನ್ನು ಡಿ. 11ರಿಂದ 26ರೊಳಗಾಗಿ ನಂ. 29, ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ ಗದಗ ಇಲ್ಲಿಗೆ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.