ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸುವಂತೆ ರೈತರ ಆಗ್ರಹ

KannadaprabhaNewsNetwork |  
Published : Oct 25, 2024, 12:48 AM IST
ಕಾಲುವೆ ಮುಖಾಂತರ ಸರಾಗವಾಗಿ ನೀರನ್ನು ಹರಿಯುವ ವ್ಯವಸ್ಥೆಯನ್ನಯ ಮಾಡಿ | Kannada Prabha

ಸಾರಾಂಶ

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯಲ್ಲಿನ ಗಿಡ- ಗಂಟೆಗಳು, ತ್ಯಾಜ್ಯವನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕಿತ್ತು. ರಾಜ್ಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದರೂ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲಾಗುತ್ತಿಲ್ಲ ಎಂಬುದು ರೈತರ ಆಕ್ರೋಶದ ಮಾತಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದ್ದರೂ ತಾಲೂಕಿನ ರೈತರಿಗೆ ಯಾವುದೇ ಉಪಯೋಗವಿಲ್ಲದೆ, ಮಳೆ ನೀರೆಲ್ಲಾ ಪಕ್ಕದ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿರುವುದನ್ನು ಖಂಡಿಸಿ ಹಸಿರು ಪಡೆ ರೈತರು, ಕಿಂಡಿ ಅಣೆಕಟ್ಟಿನ ಬಳಿ ನದಿಗೆ ಇಳಿದು ಬುಧವಾರ ಪ್ರತಿಭಟನೆ ನಡೆಸಿದರು.

ಹಸಿರುಪಡೆ ರೈತ ಮುಖಂಡ ಸೋಮಶೇಖರಗೌಡ ಮಾತನಾಡಿ, ಬಯಲುಸೀಮೆ ಭಾಗದಲ್ಲಿ ಎರಡು ವರ್ಷಗಳ ನಂತರ ನದಿ ತುಂಬಿ ಹರಿಯುತ್ತಿದೆ, ಇಲ್ಲಿ ಹರಿಯುವ ನೀರು ಈ ಭಾಗದ ಮರಳೂರು, ಇಡಗೂರು, ಚಂದನದೂರು, ಯಾಕಾರ್ಲಾಹಳ್ಳಿ, ಕಡಗತ್ತೂರು, ತಿಂಗಳೂರು ಮುಂತಾದ ಕೆರೆಗಳ ಜೀವನಾಡಿಯಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಗಳ ಕಣ್ಣುಗಳು ಸಂಪೂರ್ಣವಾಗಿ ಹಾಳಾಗಿದ್ದು, ಹರಿದು ಬರುತ್ತಿರುವ ನೀರೆಲ್ಲ ಪಕ್ಕದ ರಾಜ್ಯದ ಪಾಲಾಗುತ್ತಿದೆ ಮತ್ತು ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯನ್ನು ದುರಸ್ತಿಗೊಳಿಸದೇ ಇರುವುದರಿಂದ ಕಾಲುವೆಯಲ್ಲಿ ಗಿಡ, ಗಂಟೆಗಳು, ಪ್ಲಾಸ್ಟಿಕ್ ಬಾಟಲಿ ಮತ್ತು ತ್ಯಾಜದಿಂದ ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾದ್ಯವಾಗುತ್ತಿಲ್ಲ. ಇದರಿಂದ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ತಕ್ಷಣಕ್ಕೆ ತಾತ್ಕಾಲಿಕವಾಗಿ ನೀರು ಸರಾಗವಾಗಿ ಹರಿಯಲು ಕಿಂಡಿಯ ಬಳಿ ಅಡ್ಡಲಾಗಿರುವ ತ್ಯಾಜ್ಯವನ್ನು ಜೆಸಿಬಿ ಮುಖಾಂತರ ಸ್ವಚ್ಛಗೊಳಿಸಿ ನೀರು ಹರಿಯುವಂತೆ ವ್ಯವಸ್ಥೆ ಮಾಡಿಸಿದರು. ತಾತ್ಕಾಲಿಕವಾಗಿ ಆಂಧ್ರ ಪ್ರದೇಶಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸಲು ಮರಳು ಮೂಟೆಗಳನ್ನು ನೀರಿಗೆ ಅಡ್ಡಲಾಗಿ ಅಳವಡಿಲಾಗುವುದು, ಮತ್ತು ಕಾಲುವೆಯಲ್ಲಿ ಬೆಳೆದಿರುವ ತ್ಯಾಜ್ಯವನ್ನು ಸಂಬಂಧಿಸಿದ ಇಲಾಖೆ ವತಿಯಿಂದ ಎರಡು ದಿನಗಳೊಳಗೆ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕಿನ ರೈತರ ಮನವೊಲಿಸಿ ಮುಷ್ಕರ ನಿಲ್ಲಿಸಿದರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯಲ್ಲಿನ ಗಿಡ- ಗಂಟೆಗಳು, ತ್ಯಾಜ್ಯವನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಬೇಕಿತ್ತು. ರಾಜ್ಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದರೂ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲಾಗುತ್ತಿಲ್ಲ ಎಂಬುದು ರೈತರ ಆಕ್ರೋಶದ ಮಾತಾಗಿದೆ.

ತಹಸೀಲ್ದಾರ್‌ ಹೇಳಿದಂತೆ ಎರಡು ದಿನಗಳೊಳಗೆ ಕಾಲುವೆಯಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸದಿದ್ದಲ್ಲಿ ತಾಲೂಕಿನಾದ್ಯಂತ ಎಲ್ಲಾ ರೈತರು, ರೈತಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಸೋಮಶೇಖರ್ ಗೌಡ ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಹಸಿರು ಪಡೆ ರೈತರಾದ ನಾಗಣ್ಣ, ಉಮಾಶಂಕರ್, ಮಂಜುನಾಥ್, ಸೋಮಶೇಖರ್ ಗೌಡ, ಪ್ರಸನ್ನ ಕುಮಾರ್, ಸುರೇಶ, ಚಂದ್ರ, ರಾಮೇಗೌಡ, ಲಕ್ಷ್ಮೀಪತಿ, ರಾಘವೇಂದ್ರ ಸೇರಿದಂತೆ 150ಕ್ಕೂ ಹೆಚ್ಚಿನ ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!