ಕನ್ನಡಪ್ರಭ ವಾರ್ತೆ ವಿಜಯಪುರ
ಕಬ್ಬು ಕಟಾವು ಗ್ಯಾಂಗ್‌ನವರಿಂದ ಲಗಾಣಿ ವಸೂಲಾತಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ಎಲ್ಲ ರೀತಿಯಿಂದಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡುವ ವೇಳೆ ಗ್ಯಾಂಗಿನವರು ಬೇಕಾ ಬಿಟ್ಟಿ ಲಗಾಣಿ ಕೇಳುತ್ತಿರುವುದರಿಂದ ಕಬ್ಬು ಬೆಳೆದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಅಂದುಕೊಂಡ ಹಾಗೆ ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಆರಂಭವಾಗಿದ್ದರೆ ಜಿಲ್ಲೆಯಲ್ಲಿ ಈಗಾಗಲೇ ಶೇ.40 ರಿಂದ 50ರಷ್ಟು ಕಬ್ಬು ಕಟಾವು ಆಗಿ ಕ್ರಸ್ಸಿಂಗ್ ಆಗಬೇಕಾಗಿತ್ತು. ಆದರೆ ಕಬ್ಬು ಕಟಾವು ಮಾಡುವ ಗ್ಯಾಂಗಿನವರು ಅಂದಾಜು ೨೦ ರಿಂದ ೨೫ ಟನ್ ಕಟಾವು ಮಾಡಲು ನಾಲ್ಕರಿಂದ ₹5000 ರವರೆಗೆ ಲಗಾಣಿ ಕೇಳುತ್ತಾರೆ. ಯಂತ್ರದ ಮುಖಾಂತರ ಕಟಾವು ಮಾಡಿಸಿದರೆ ಅವರು ಕೂಡ ಪ್ರತಿ ಎಕರೆಗೆ ₹7 ಸಾವಿರದಂತೆ ಹಣ ಕೇಳುತ್ತಾರೆ ಎಂದು ಆರೋಪಿಸಿದರು.
ಕಬ್ಬು ಬೆಳೆದ ರೈತರು ಗ್ಯಾಂಗಿನವರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಲಗಾಣಿ ಕೊಡದಿದ್ದರೆ ಕಬ್ಬು ಕಟಾವು ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆ ಗ್ಯಾಂಗಿನವರಿಗೆ ಸಕ್ಕರೆ ಕಾರ್ಖಾನೆಯವರೇ ನೋಡಿಕೊಳ್ಳಬೇಕು. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಗ್ಯಾಂಗಿನವರಿಂದ ಒಂದು ರೀತಿ ಲಗಾಣಿ ವಿಷಯದಲ್ಲಿ ಕಬ್ಬು ಬೆಳೆದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರತಿ ಸಲ ಆರಂಭದಲ್ಲಿ ಕಡಿಮೆ ಲಗಾಣಿ ₹೧೦೦೦ ದಿಂದ ₹೧೫೦೦ ವರೆಗೆ ಕೊಡುತ್ತಿದ್ದ ರೈತರಿಗೆ ಇದೀಗ ಕಟಾವು ತಡವಾಗಿ ಆರಂಭಿಸಿದ್ದರಿಂದ ಕಟಾವು ಮಾಡುವ ಕಾರ್ಮಿಕರು ಒಂದು ಟ್ರ್ಯಾಕ್ಟರ್ (ಡಬಲ್ ಟ್ರೈಲರಿಗೆ) ಕನಿಷ್ಠ ₹7 ಸಾವಿರ ಲಗಾಣಿ ಕೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.೧೦ ಟನ್ ಕಬ್ಬಿಗೆ ಒಂದು ಟನ್ ಕಬ್ಬಿನ ಬೆಲೆಗಿಂತಲೂ ಹೆಚ್ಚಿಗೆ ಕೊಡಬೇಕಾಗುತ್ತದೆ. ಇದು ರೈತರಿಗೆ ದೊಡ್ಡ ಹೊರೆಯಾಗಿದೆ. ಲಗಾಣಿ ಕೊಡಲು ಒಪ್ಪದಿದ್ದರೆ. ಬೇರೆ ರೈತನ ಹೊಲಕ್ಕೆ ಹೋಗುತ್ತಾರೆ. ಹೀಗಾಗಿ ರೈತರು ಜಿದ್ದಿಗೆ ಬಿದ್ದು ಲಗಾಣಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅವಧಿ ಮೀರಿದ ಕಬ್ಬಿಗೆ ಗರಿ ಮೂಡಿದೆ ಎಂದರು.
ಇದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ನಾನಾ ಕಾರಣಗಳಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಆಳೆತ್ತರಕ್ಕೆ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿಯಾಗುತ್ತಿವೆ. ಈ ರೀತಿಯಾದ ಕಬ್ಬನ್ನು ಮರುದಿನವೇ ಕಾರ್ಖಾನೆಗೆ ಸಾಗಿಸಬೇಕು. ಇಲ್ಲದಿದ್ದರೆ ಕಬ್ಬಿನಲ್ಲಿನ ಸಕ್ಕರೆ ಅಂಶ ಸೋರಿಕೆಯಾಗಿ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಎಲ್ಲ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರ ಸಭೆ ನಡೆಸಬೇಕು. ಸಭೆ ದಿನಾಂಕ ನಿಗದಿಪಡಿಸಿ ಸಭೆಯಲ್ಲಿ ರೈತ ಮುಖಂಡರನ್ನು ಆಹ್ವಾನಿಸಬೇಕು. ಕಬ್ಬು ಬೆಳೆದ ರೈತರಿಂದ ಗ್ಯಾಂಗಿನವರು ಲಗಾಣಿ ಕೇಳದಂತೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹೊನಕೇರೆಪ್ಪ ತೆಲಗಿ, ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಕೋಳೂರ, ರಾಮನಗೌಡ ಹಾದಿಮನಿ, ಬಸನಗೌಡ ಪಾಟೀಲ, ಯಂಕನಗೌಡ ಪಾಟೀಲ, ಹಣಮಂತರಾಯ ಗುಣಕಿ, ಅಪ್ಪಾಸಾಹೇಬಗೌಡ ಕೊಳೆಗೇರಿ, ಮಲ್ಲಿಕಾರ್ಜುನ ನಾವಿ, ಹಣಮಗೌಡ ಮಂಗ್ಯಾಳ, ಶಿವನಗೌಡ ಪಾಟೀಲ, ರುದ್ರಗೌಡ ಬಿರಾದಾರ, ಬಸನಿಂಗಪ್ಪಗೌಡ ಬಿರಾದಾರ, ಶರಣಪ್ಪಗೌಡ ನರಸಲಗಿ, ಭೀಮಶಪ್ಪಗೌಡ ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.