- 21ರಂದು ನರಗುಂದ ರೈತ ಹುತಾತ್ಮರ ದಿನ, ನವೀಕೃತ ಸ್ಮಾರಕ ಉದ್ಘಾಟನೆ: ಹೊನ್ನೂರು ಮುನಿಯಪ್ಪ ಮಾಹಿತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಧಾರವಾಡ ಜಿಲ್ಲೆ ನವಲಗುಂದ ತಾ. ಅಳಗವಾಡಿ ಗ್ರಾಮದ ರೈತ ಸ್ಮಾರಕದ ಬಳಿ 46ನೇ ವರ್ಷದ ನರಗುಂದ- ನವಲಗುಂದ ರೈತ ಹುತಾತ್ಮರ ದಿನಾಚರಣೆ, ರೈತ ಹುತಾತ್ಮ ಬಸಪ್ಪ ಶಿವಪ್ಪ ಲಕ್ಕುಂಡಿಯವರ ನವೀಕರಿಸಿದ ರೈತ ಸ್ಮಾರಕ ಉದ್ಘಾಟನಾ ಸಮಾರಂಭವನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜು.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ 153 ರೈತರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿ ಹುತಾತ್ಮರಾಗಿದ್ದರೂ ಇಂದಿಗೂ ರೈತರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೇ ಮರೀಚಿಕೆಯಾಗಿವೆ. ಈಗಿನ ಸರ್ಕಾರಗಳು ಮತ್ತೆ ರೈತರ ಭೂಮಿ ಕಸಿಯುವ ಹುನ್ನಾರ ನಡೆಸಿದ್ದು, ರಾಜಾದ್ಯಂತ ರೈತರ ಮೇಲೆ ಇಂತಹ ಹಲವಾರು ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಪೂರ್ವ ಕರ್ನಾಟಕದಲ್ಲಿ ಬರಗಾಲ ಘೋಷಿಸಿ ಸೂಕ್ತ ಪರಿಹಾರ ಒದಗಿಸಬೇಕು. ಡಾ.ಸ್ವಾಮಿನಾಥನ್ ವರದಿ **(C2+50%)** ಅನ್ವಯ ಕನಿಷ್ಠ ಬೆಂಬಲ ಬೆಲೆಯ ಕಾಯಿದೆ ಶಾಸನಬದ್ಧಗೊಳಿಸಬೇಕು. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಅಡಿಗಳಿಗೆ ಹೆಚ್ಚಿಸಿದ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಯನ್ನು ಹೊರಡಿಸುವುದು. ನಾವಲಿ ಜಲಾಶಯದ ಕಾಮಗಾರಿ ಆರಂಭಿಸಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಯ್ಯ, ಸಂತೋಷ ಕಬ್ಬೂರು, ಕೆ.ಟಿ.ಗಣೇಶ, ಎಂ.ಎನ್.ಮಂಜುನಾಥ ದೇವರಹಳ್ಳಿ ಇತರರು ಇದ್ದರು.
(ಬಾಕ್ಸ್) * ರೈತರ ಬೇಡಿಕೆಗಳೇನು?
- ರಸಗೊಬ್ಬರ ಸಮರ್ಪಕವಾಗಿ ವಿತರಿಸಬೇಕು, ಕಲಬೆರಕೆ ಗೊಬ್ಬರದ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
- ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸದೇ, ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡಬೇಕು.
- - -
-17ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.