ಗದಗ: ಸರ್ಕಾರದ ಉಚಿತ ಭಾಗ್ಯಗಳು ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿವೆ. ಕೂಡಲೇ ಬಂದ್ ಮಾಡಿ ರಾಜ್ಯಕ್ಕೆ, ಜನತೆಗೆ ಹೊರಯಾಗುವುದನ್ನು ತಪ್ಪಿಸಿ ರಾಜ್ಯದ ಭವಿಷ್ಯವನ್ನು ಕಾಪಾಡಿ ಎಂದು ಕಾಶಿ ಜಂಗಮವಾಡಿ ಮಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಗ್ಯಾರಂಟಿ ಹಣದಿಂದ ಬದುಕು ಕಟ್ಟಲಾಗುವುದಿಲ್ಲ. ಮನೆಗೆ ₹2000ಯಿಂದ ಮನೆ ನಡೆಯುವುದಿಲ್ಲ. ಒಂದು ಸಿಲಿಂಡರ್ ಕೂಡ ಬರುವುದಿಲ್ಲ. ಆದ್ದರಿಂದ ನಾವು ಸರ್ಕಾರಕ್ಕೆ ಹೇಳಬೇಕು. ಉಚಿತ ಭಾಗ್ಯಗಳನ್ನು ಬಂದ್ ಮಾಡಿ, ರಾಜ್ಯದ ಅಭಿವೃದ್ಧಿ ಮಾಡಿ, ಯುವಜನತೆಗೆ ಉದ್ಯೋಗ ಕೊಡಿ ಎಂದರು.
ಮಠಾಧೀಶರಾದವರು ಜನರ, ಭಕ್ತರ, ರೈತರ, ಯುವಕರ ಹಿತವನ್ನು ಕಾಯಬೇಕು. ತಪ್ಪು ನಿರ್ಧಾರ, ತಪ್ಪು ನಡೆಗೆ ಗುರುವಿನ ಸ್ಥಾನದಲ್ಲಿದ್ದವರು ಸೂಕ್ತ ಮಾರ್ಗದರ್ಶನ ಮಾಡುವುದು ಗುರುವಿನ ಕರ್ತವ್ಯ. ದೇಶ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಪಕ್ಷ ಯಾವುದೇ ಇರಲಿ, ಅವು ಜನತೆಯ, ಮತದಾರರ ಹಿತವನ್ನು ಕಾಯಬೇಕು. ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಜನತೆಗೆ ಹೊರೆಯಾಗಿ ಸರ್ಕಾರ ಸಾಲದ ಮಹಾ ಕುಳಿಗೆ ಬೀಳುವ ಹಂತ ತಲುಪಬಾರದು. ಅಂತಹ ಸಂದರ್ಭದಲ್ಲಿ ಧರ್ಮ ಗುರುಗಳು ಎಚ್ಚರಿಸಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ರೈತರು ಏಕಬೆಳೆ ನಂಬದೆ ಬಹುಬೆಳೆ ಪದ್ಧತಿ ಮತ್ತು ಹಲಸಿನ ಹಣ್ಣಿನ ಸಂಸ್ಕರಣೆಯಂತಹ ಮೌಲ್ಯವರ್ಧಿತ ಕೃಷಿಗೆ ಮುಂದಾಗಬೇಕು ಎಂದರು.ಕಾನೂನು ಎಲ್ಲರಿಗೂ ಒಂದೇ ಇರಬೇಕು. ಒಬ್ಬರ ಕಣ್ಣಲ್ಲಿ ಸುಣ್ಣ, ಇನ್ನೊಬ್ಬರ ಕಣ್ಣಲ್ಲಿ ಬೆಣ್ಣೆ ಎಂಬಂತಾಗಬಾರದು. ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೋ ಅಲ್ಲಿ ಪರಿಸ್ಥಿತಿ ಏನಾಗಿದೆ ಎಂಬುದನ್ನು ನಾವು ನಿತ್ಯ ಮಾಧ್ಯಮದಿಂದ ತಿಳಿದಿದ್ದೇವೆ. ಆದ್ದರಿಂದ ಹಿಂದೂ ರಾಷ್ಟ್ರದಲ್ಲಿ ಹಿಂದೂ ಅಲ್ಪಸಂಖ್ಯಾತನಾಗಬಾರದು. ಪ್ರತಿಯೊಬ್ಬರು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು. ಒಂದು ಮನೆತನಕ್ಕೆ, ಒಂದು ದೇಶಕ್ಕೆ, ಒಂದು ಧರ್ಮ ರಕ್ಷಣೆಗೆ ಎಂದರು.