ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಮಾಡುವ ತಪ್ಪಿಗೆ ರೈತರು ಹೈರಾಣಾಗುವ ಪರಿಸ್ಥಿತಿ ಎದುರಾಗಿದೆ ಎಂದು ಟಿಎಪಿಸಿಎಂಎಸ್‌ನ ಅಧ್ಯಕ್ಷ ಎಂ.ಆರ್. ಅನಿಲ್ ಕುಮಾರ್ ಕಚೇರಿಯ ಕಾರ್ಯವೈಖರಿಯನ್ನ ತರಾಟೆಗೆ ತೆಗೆದುಕೊಂಡ ಪ್ರಸಂಗ ಕೆಡಿಪಿ ಸಭೆಯಲ್ಲಿ ನಡೆಯಿತು.ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ತಾಲೂಕು ಕಚೇರಿಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು. ಪಹಣಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಆಗುವ ಸಣ್ಣಪುಟ್ಟ ತಪ್ಪುಗಳಿಗಾಗಿ ರೈತರು ಮುಂದಿನ ಹಂತದಲ್ಲಿ ಹತ್ತಾರು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದನ್ನು ಸರಳೀಕರಣಗೊಳಿಸದಿದ್ದರೆ ಎಲ್ಲರಿಂದ ಹಿಡಿಶಾಪಕ್ಕೆ ಒಳಗಾಗಬೇಕಾಗುತ್ತದೆ. ತಾಲೂಕು ಕಚೇರಿಗೆ ಚಪ್ಪಲಿ ಸವೆಸಿ ಇಡೀ ವ್ಯವಸ್ಥೆಯನ್ನು ದೂಷಿಸುವಂತಾಗುತ್ತದೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂಪಿ ಪ್ರಕಾಶ್ ಗೌಡ ಇದಕ್ಕೆ ದನಿಗೂಡಿಸಿದರು. ಕಚೇರಿಯಲ್ಲಾಗುವ ಲೋಪದೋಷಗಳಿಂದ ರಾಜಕೀಯ ಪಕ್ಷಗಳ ಮುಖಂಡರು ದಲ್ಲಾಳಿಗಳಾಗಬೇಕಾಗಿದೆ. ಸದಾ ಶಾಸಕರೊಂದಿಗೆ ಇರುತ್ತೀಯ, ಇನ್ನೂ ಕೆಲಸ ಆಗುತ್ತಿಲ್ಲವಾ ಅಂತ ಜನ ಕೇಳುವoತಾಗಿದೆ. ಕಂದಾಯ ಇಲಾಖೆಯ ಕೆಲಸಕ್ಕೆ ಬರುವವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಕೂಡಲೇ ಅವರ ಕೆಲಸ ಆಗುವಂತೆ ಮಾಡಬೇಕು ಎಂದು ಉತ್ತರಿಸಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಸಿ. ಎನ್. ಬಾಲಕೃಷ್ಣ ಜಿಲ್ಲಾ ಉಪ ವಿಭಾಗ ಅಧಿಕಾರಿ ಮಾರುತಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಜೂನ್ ೬ರಂದು ಮಧ್ಯಾಹ್ನ ೨:೩೦ಕ್ಕೆ ತಾಲೂಕು ಕಚೇರಿಯಲ್ಲಿ ಸ್ಥಳದಲ್ಲಿ ತಿದ್ದುಪಡಿ ಮಾಡುವ ಕಾರ್ಯಕ್ರಮ ರೂಪಿಸುವಂತೆ ಸೂಚಿಸಿದರು. ಅಲ್ಲದೆ ಸಾರ್ವಜನಿಕರು ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅಂದು ಹಾಜರಿದ್ದು ಸರಿಪಡಿಸಿಕೊಳ್ಳುವಂತೆಯೂ ಮನವಿ ಮಾಡಿದರು.ವೈದ್ಯರನ್ನು ಬದಲಾಯಿಸಿ ತಾಲೂಕಿನ ಒಳಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ೨೪ ಗಂಟೆ ಒಳಗೆ ಬದಲಾಯಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ತಾಲೂಕು ಆರೋಗ್ಯ ಅಧಿಕಾರಿಗಳೇ ಹೊಣೆಯಾಗ ಬೇಕಾಗುತ್ತದೆ. ಬೇರೊಬ್ಬ ವೈದ್ಯರನ್ನ ಅಲ್ಲಿಗೆ ನೇಮಿಸಬೇಕು. ಈ ಕುರಿತು ಆರೋಗ್ಯ ಸಚಿವರ ಬಳಿಯೂ ಮನವಿ ಮಾಡಿದ್ದು, ವೈದ್ಯರ ವೈಯಕ್ತಿಕ ಸಮಸ್ಯೆಗಳು ರೋಗಿಗಳ ಮೇಲೆ ಪರಿಣಾಮ ಬೀರುವಂತಾಗಬಾರದು. ಕಳೆದ ಸಭೆಯಲ್ಲೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಶಾಸಕರು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಾಸಿಲ್ದಾರ್ ನವೀನ್ ಕುಮಾರ್ ತಾಲೂಕು ಪಂಚಾಯಿತಿ ಪುರಸಭಾಧ್ಯಕ್ಷ ಸಿ ಎನ್ ಮೋಹನ್ , ನಾಮನಿರ್ದೇಶಕ ಸದಸ್ಯರಾದ ಯೋಗೇಶ್, ಮಧುಸೂದನ್, ಮಹೇಶ್, ತೇಜ ಪ್ರಸಾದ್, ಪಿಎಲ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಇದ್ದರು.