- ಯೂರಿಯಾ ಪಡೆಯಲು ಸರತಿ ಸಾಲು, ತಳ್ಳಾಟ । ಗೊಬ್ಬರ ಸಿಗದೇ ಶಪಿಸಿದ ರೈತರು
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಯಿಂದಾಗಿ ಶುಕ್ರವಾರ ಶ್ರೀ ಸಾಯಿ ಆಗ್ರೋ ಫರ್ಟಿಲೈಜರ್ ಸೇರಿದಂತೆ ವಿವಿಧ ಗೊಬ್ಬರ ಅಂಗಡಿಗಳ ಮುಂದೆ ರೈತರು ಜಮಾಯಿಸಿದ್ದರು. ಮಳೆಯನ್ನೂ ಲೆಕ್ಕಿಸದೇ ರೈತರು ಯೂರಿಯಾ ಗೊಬ್ಬರ ಪಡೆಯಲು ತಳ್ಳಾಟದ ಮಧ್ಯೆಯೂ ಸರದಿ ಸಾಲಿನಲ್ಲಿ ನಿಂತು ಗೊಬ್ಬರ ಪಡೆಯಲು ಹರಸಾಹಸ ನಡೆಸಿದರು.ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದರಾಮಯ್ಯ ನೇತೃತ್ವದಲ್ಲಿ ಪೊಲೀಸರು ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವಲ್ಲಿ ಹರಸಾಹಪಟ್ಟರು. ಉತ್ತರ ಭಾಗದ ರಸ್ತೆಯಲ್ಲೇ ರೈತರು ಸಾಲು ಸಾಲಾಗಿ ನಿಂತು ಯೂರಿಯಾ ಗೊಬ್ಬರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ದೃಶ್ಯ ಕಂಡುಬಂದಿತು. ಇದರಿಂದಾಗಿ ವಾಹನಗಳ ಓಡಾಟಕ್ಕೆ ಕೊಂಚ ತೊಂದರೆಯಾಗಿಯಿತು.
ಆಧಾರ್ ಕಾರ್ಡ್ ಮೂಲಕ ಒಬ್ಬ ರೈತರಿಗೆ 2 ಚೀಲ ಯೂರಿಯಾ ಕೊಡುತ್ತಿದ್ದಾರೆ. ಜಗಳೂರು ಪಟ್ಟಣದಲ್ಲಿ ಶಿವಲೀಲ, ಸಾಯಿ ಆಗ್ರೋ ಸೇರಿದಂತೆ ಮೂರು ಗೊಬ್ಬರಗಳ ಅಂಗಡಿಯಲ್ಲಿ ಯೂರಿಯಾ ವಿತರಿಸುತ್ತಿದ್ದಾರೆ. ಸಂಜೆ 5 ಗಂಟೆಗೆ ಹೊತ್ತಿಗೆ ಯೂರಿಯಾ ಗೊಬ್ಬರ ಖಾಲಿಯಾಗಿಯಿತು.ಈ ಸಂದರ್ಭ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು ಪ್ರತಿಕ್ರಿಯಿಸಿ, ಮಳೆಯನ್ನೂ ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತ ಬಹುತೇಕ ರೈತರಿಗೆ ಯೂರಿಯಾ ಸಿಕ್ಕಿಲ್ಲ. ಇದರಿಂದಾಗಿ ಸರ್ಕಾರ, ಅಧಿಕಾರಿಗಳಿಗೆ ರೈತರು ಹಿಡಿಶಾಪ ಹಾಕುತ್ತಾ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಸಮರ್ಪಕ ಯೂರಿಯಾ ತರುವಂತೆ ಕೃಷಿ ಅಧಿಕಾರಿಗಳಿಗೆ ರೈತರೆಲ್ಲ ಮನವಿ ಮಾಡಿದ್ದೇವೆ ಎಂದರು.
- - -(ಟಾಪ್ ಕೋಟ್)
ಜಗಳೂರು ತಾಲೂಕಿನಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ತರಿಸಲಾಗಿತ್ತು. ಪಟ್ಟಣದ 3 ಅಂಗಡಿಗಳಿಗೆ 6 ಲೋಡ್, ಬಿಳಿಚೋಡು, ಸೊಕ್ಕೆ, ಗಡಿಮಾಕುಂಟೆ, ಪಲ್ಲಾಗಟ್ಟೆ ಸೇರಿದಂತೆ ವಿವಿಧ ಕಡೆ ಯೂರಿಯಾ ಗೊಬ್ಬರ ಸರಬರಾಜು ಮಾಡಲಾಗಿದೆ. ಶನಿವಾರ ಸೊಸೈಟಿಗಳಿಗೆ, ವಿವಿಧ ಗೊಬ್ಬರದ ಅಂಗಡಿಗಳಿಗೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರು ಆತಂಕಪಡಬಾರದು.- ಎಚ್.ಶ್ವೇತಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ
- - --25ಜೆ.ಜಿ.ಎಲ್.2.ಜೆಪಿಜಿ: ಜಗಳೂರು ತಾಲೂಕಿನಲ್ಲಿ ಶುಕ್ರವಾರ ವಿವಿಧ ಗೊಬ್ಬರ ಅಂಗಡಿಗಳ ಮುಂದೆ ರೈತರು ಯೂರಿಯಾ ಗೊಬ್ಬರ ಪಡೆಯಲು ಜಮಾಯಿಸಿದ್ದರು.
-25ಜೆ.ಜಿ.ಎಲ್.3: ರಾಜನಹಟ್ಟಿ ರಾಜು