ಶಿರಾಳಕೊಪ್ಪ: ಶಿಕಾರಿಪುರ ಸವರ್ತೋಮುಖವಾಗಿ ಅಭಿವ್ರದ್ಧಿ ಹೊಂದಿದೆ ಎಂದು ನಿಶ್ಚಿಂತೆಯಿಂದ ಇದ್ದ ನಮಗೆ ರೈತರೊಂದಿಗೆ ಟೀಸಿ ಸುಟ್ಟಾಗ ಮೆಸ್ಕಾ ಇಲಾಖೆ ಸರಿಯಾಗಿ ಸ್ಪಂದಿಸದೇ ಹೊಸತಲೆನೋವು ಪ್ರಾರಂಭವಾಗಿದೆ. ರೈತರಿಗೆ ಸಮಸ್ಯೆ ಆದಲ್ಲಿ ನಾವು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಗುಡುಗಿದರು.ಭಾನುವಾರ ಶಿರಾಳಕೊಪ್ಪ ಹೊರವಲಯದ ಎಪಿಎಂಸಿ ಆವರಣದಲ್ಲಿ ಇರುವ ಟೀಸಿ ರಿಪೇರಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಪರಶೀಲಿಸಿ ಬಳಿಕ ರೈತರೊಡಗೂಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈ ವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಟೀಸಿ ಕೆಟ್ಟರೆ ಕನಿಷ್ಠ ೧೫ ದಿನ ತೆಗೆದು ಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪಕ್ಷದ ದುರೀಣ ಕೆ.ರೇವಣಪ್ಪ ಮಾತನಾಡಿ, ಇಲಾಖೆಯವರು ಬೇರೆ ತಾಲೂಕಿನವರಿಗೆ ಟೀಸಿ ಕೊಟ್ಟು ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕ ವಿಜಯೇಂದ್ರ, ಈ ರಿಪೇರಿ ಕೇಂದ್ರ ಇಲ್ಲಿಯ ರೈತರಿಗೆ ಅನುಕೂಲವಾಗಲಿ ಎಂದು ಪ್ರಾರಂಭಮಾಡಿದ್ದು, ಇಲ್ಲಿಯ ರೈತರಿಗೆ ಮಾತ್ರ ಟೀಸಿ ತಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು. ೧೫ ದಿನ ಕಾಯಲು ಈ ಕೇಂದ್ರ ಮಾಡಿಲ್ಲ. ರಿಪೇರಿ ಕೇಂದ್ರಲ್ಲಿ ಒಬ್ಬ ಅಧಿಕಾರಿ ನೇಮಿಸಿ ಎಂದು ಸೂಚಿಸಿದರು.
ರೈತರಿಗೆ ಲೈನ್‌ಮೆನ್ ಮತ್ತು ಅಧಿಕಾರಿಗಳು ಸ್ಪಂದಿಸಬೇಕು. ರೈತರಿಗೆ ತೊಂದರೆ ಆದರೆ ನಾನು ಸಹಿಸುವದಿಲ್ಲ ಎಂದ ಅವರು, ಇಲ್ಲಿಯ ರಿಪೇರಿ ಕೇಂದ್ರದ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಶಾಸಕರೊಂದಿಗೆ ತಾಲೂಕ ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ, ಮಾಜಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಸಿದ್ದಲಿಂಗಪ್ಪ, ಯೋಗಿಶಪ್ಪ, ಸುಬ್ರಮಣ್ಯ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.