ಶನಿವಾರ ಚೀಕನಹಳ್ಳಿ ಸಮೀಪದ ಬಂಡೆ ಗ್ರಾಮದ ರಮೇಶ್ ಸುವರ್ಣ ಎಂಬುವವರ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು, ತೋಟದಲ್ಲಿದ್ದ ಬಾಳೆ ಬೆಳೆ ತಿಂದು ತುಳಿದು ಹಾಕಿವೆ. ಜತೆಗೆ ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ಅಡಕೆ ಗಿಡಗಳನ್ನೆಲ್ಲ ಕಿತ್ತು ಎಲ್ಲೆಂದರಲ್ಲಿ ಬಿಸಾಡಿವೆ.
ಬೇಲೂರು: ಕಾಡಾನೆಗಳು ದಾಳಿ ನಡೆಸಿ, ರೈತರು ಜಮೀನಿನಲ್ಲಿ ನೆಟ್ಟಿದ್ದ ಬಾಳೆ ಬೆಳೆ, ಸಾಕಷ್ಟು ಅಡಿಕೆ ಗಿಡಗಳನ್ನು ಕಿತ್ತು ಎಲ್ಲೆಂದರಲ್ಲಿ ಬಿಸಾಡಿದ್ದಲ್ಲದೆ, ಕಾಫಿ ಗಿಡಗಳನ್ನು ಹಾಳು ಮಾಡಿರುವ ಘಟನೆ ತಾಲೂಕಿನ ಅರೇಹಳ್ಳಿ ಹೋಬಳಿಯ ಚೀಕನಹಳ್ಳಿ ಸಮೀಪದ ಬಂಡೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಲೆನಾಡು ಭಾಗದ ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ 40ಕ್ಕೂ ಹೆಚ್ಚಿನ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತಿವೆ. ಈ ಕಾಡಾನೆಗಳ ಹಿಂಡು ಸಮೀಪದ ಕಾಫಿ ತೋಟ ಮತ್ತು ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆ ನಾಶ ಪಡಿಸುತ್ತಿವೆ. ಜತೆಗೆ ಬಾಳೆ ತಿಂದು, ತುಳಿದು ಹಾಕಿದ್ದಲ್ಲದೇ ತೋಟದಲ್ಲಿದ್ದ ಅಡಿಕೆ ಗಿಡಗಳನ್ನು ಸೊಂಡಿಲಿನಿಂದ ಕಿತ್ತು ಬಿಸಾಡಿ ನಾಶಪಡಿಸಿವೆ. ಇದರಿಂದಾಗಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಕೋಗೋಡು, ಕಿತ್ತಾವರ,ಕುಂಬಾರಳ್ಳಿ, ಸಿರಗುರ, ಹುನುಗನ ಹಳ್ಳಿ ಗ್ರಾಮದ ಆಸುಪಾಸಿನಲ್ಲೇ ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದರೂ ಏನೂ ಮಾಡಲಾಗದ ಸ್ಥಿತಿಗೆ ಎದುರಾಗಿದೆ. ಆದರೆ ಮಳೆಯ ನಡುವೆಯೇ ಆನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ.
ಶನಿವಾರ ಚೀಕನಹಳ್ಳಿ ಸಮೀಪದ ಬಂಡೆ ಗ್ರಾಮದ ರಮೇಶ್ ಸುವರ್ಣ ಎಂಬುವವರ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು, ತೋಟದಲ್ಲಿದ್ದ ಬಾಳೆ ಬೆಳೆ ತಿಂದು ತುಳಿದು ಹಾಕಿವೆ. ಜತೆಗೆ ತೋಟದಲ್ಲಿ ಹುಲುಸಾಗಿ ಬೆಳೆದಿದ್ದ ಅಡಕೆ ಗಿಡಗಳನ್ನೆಲ್ಲ ಕಿತ್ತು ಎಲ್ಲೆಂದರಲ್ಲಿ ಬಿಸಾಡಿವೆ. ಇದರಿಂದಾಗಿ ವರ್ಷಗಟ್ಟಲೇ ಕಷ್ಟಪಟ್ಟು ಬೆಳೆಸಿದ್ದ ಗಿಡಗಳೆಲ್ಲ ಕ್ಷಣಾರ್ಧದಲ್ಲಿ ನಾಶವಾಗಿರುವುದನ್ನು ಕಂಡು ಮಾಲೀಕರು ಆನೆಗಳಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಪ ಹಾಕುತ್ತಿದ್ದಾರೆ.
ಇನ್ನೂ ಕಾಡಾನೆ ಗಳಿಂದ ಭಯದ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಆನೆಗಳನ್ನು ಶಾಶ್ವತವಾಗಿ ಮಲೆನಾಡು ಭಾಗದಿಂದ ದೂರದ ಕಾಡಿಗೆ ಓಡಿಸುವುದಕ್ಕೆ ಮುಂದಾಗಬೇಕು ಎಂದು ಅಲವತ್ತುಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.