ಹಾವೇರಿ: ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ರೈತರು ಅಣಿಯಾಗಿದ್ದಾರೆ. ಬಿತ್ತನೆ ಬೀಜಕ್ಕಾಗಿ ರೈತರು ಗುರುವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ ಎದುರು ಮುಗಿಬಿದ್ದ ಘಟನೆ ನಡೆಯಿತು. ಸೋಯಾಬಿನ್ ಹಾಗೂ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನೂರಾರು ರೈತರು ಬೆಳಗ್ಗೆಯಿಂದಲೇ ಕಾದು ನಿಂತಿದ್ದರು. ಬೆಳಗ್ಗೆ 6 ಗಂಟೆಯಿಂದಲೇ ರೈತರು ಸರತಿ ಸಾಲಿಲ್ಲಿ ನಿಂತಿದ್ದರೂ ನೂರಾರು ಸಂಖ್ಯೆಯ ರೈತರು ಸೇರಿದ್ದರಿಂದ ನೂಕುನುಗ್ಗಲು, ತಳ್ಳಾಟ ಉಂಟಾಯಿತು. ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ನಿಯಂತ್ರಿಸಲು ಮುಂದಾದರು.ಕೃಷಿ ಇಲಾಖೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿತ್ತನೆ ಕಾರ್ಯ ಒಂದು ವಾರದ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ ಕೃಷಿ ಇಲಾಖೆ ಸಮಯಕ್ಕೆ ಸರಿಯಾಗಿ ಬೀಜ ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು. ಯೂರಿಯಾ ಗೊಬ್ಬರ ವಿತರಣೆಯಲ್ಲೂ ರೈತರು ಅಸಮಾಧಾನ ಹೊರಹಾಕಿದ್ದಾರೆ. ಎಕರೆಗೆ ಒಂದೇ ಚೀಲ ಯೂರಿಯಾ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಳೆ ಹೆಚ್ಚಾದರೆ ಗೊಬ್ಬರವನ್ನು ಹೆಚ್ಚು ಪ್ರಮಾಣದಲ್ಲಿ ಹಾಕಬೇಕಾಗುತ್ತದೆ. ಇದಲ್ಲದೆ, ಗೊಬ್ಬರ ಖರೀದಿಸುವ ವೇಳೆ ಅನಾವಶ್ಯಕವಾಗಿ ಇತರೆ ವಸ್ತುಗಳ ಲಿಂಕ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ಅಂಗಡಿಯವರು ಬೇರೆ ವಸ್ತುಗಳನ್ನು ಕೂಡ ತೆಗೆದುಕೊಳ್ಳಿ ಎಂದು ಬಲವಂತ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿತ್ತನೆ ಬೀಜ ವಿತರಣೆಗೆ ಚಾಲನೆ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸರ್ಕಾರದ ಕೃಷಿ ಇಲಾಖೆಯಿಂದ ವಿತರಿಸಲಾಗುವ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಮುಂಗಾರು ಹಂಗಾಮು ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದು, ರೈತರು ಸರಿಯಾಗಿ ಹದವಾದ ಮಳೆಯಾದಾಗ ಬಿತ್ತನೆ ಕಾರ್ಯವನ್ನು ಕೈಗೊಳ್ಳಬೇಕು. ಈ ವರ್ಷ ಮಳೆ ಕೊರತೆಯಾಗುವ ಮುನ್ಸೂಚನೆ ಇದ್ದು, ರೈತರು ಸಕಾಲದಲ್ಲಿ ಬಿತ್ತನೆ ಮಾಡಬೇಕು. ಸೊಯಾಬಿನ್, ಶೇಂಗಾ, ಮೆಕ್ಕೆಜೋಳ, ಹೆಸರು ಸೇರಿದಂತೆ ಸದ್ಯ ಬಿತ್ತನೆಗೆ ಅವಶ್ಯವಿರುವ ಅಗತ್ಯ ಬೀಜಗಳ ದಾಸ್ತಾನು ಇದ್ದು, ನಿಗದಿಪಡಿಸಿದ ದಾಖಲೆಗಳೊಂದಿಗೆ ರೈತರು ಸರದಿ ಸಾಲಿನಲ್ಲಿ ನಿಂತುಕೊಂಡು ಖರೀದಿಸಬೇಕು ಎಂದರು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಶಹರ ಕಾಂಗ್ರೆಸ್ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಕೃಷಿ ಇಲಾಖೆಯ ಡಿಡಿಎ ಶಿವಕುಮಾರ ಮಲ್ಲಾಡದ, ಕೃಷಿ ಅಧಿಕಾರಿ ಬಸನಗೌಡ ಪಾಟೀಲ, ಧನಂಜಯ ಟಿ.ಎನ್., ತಾಂತ್ರಿಕ ವ್ಯವಸ್ಥಾಪಕ ವನರಾಜ ಬಣಕಾರ, ರೈತ ಮುಖಂಡರಾದ ರಾಜು ತರ್ಲಘಟ್ಟ, ಶಿವಯೋಗಿ ಹೊಸಗೌಡ್ರ, ರಾಕೇಶ ಸಜ್ಜನರ, ಸಿದ್ದನಗೌಡ ಗಡಿಯಪ್ಪಗೌಡ್ರ, ದಾದಾಪೀರ ಮುಲ್ಲಾ, ಬಸವರಾಜ ಪರಮ್ಮನವರ, ಮಹಾರುದ್ರಗೌಡ ಹಾಲಗಿ, ಕುಮಾರಗೌಡ ಗಡಿಯಪ್ಪಗೌಡ್ರ ಸೇರಿದಂತೆ ರೈತರು ಇದ್ದರು. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ,ಗೊಬ್ಬರ ಪೂರೈಕೆ: ಹಾವೇರಿ ತಾಲೂಕಿನಲ್ಲಿ ಬರುವ ಕರ್ಜಗಿ, ಹಾವೇರಿ, ಗುತ್ತಲ ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿಯಾಗಿ ನೆಗಳೂರು, ಹೊಸರಿತ್ತಿ, ಮರೋಳ ಸೊಸೈಟಿಯಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜಗಳ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ 950 ಕ್ವಿಂಟಲ್ ಸೋಯಾಬಿನ್, 215.36 ಕ್ವಿಂಟಲ್ ಮೆಕ್ಕೆಜೋಳ, 114.90 ಕ್ವಿಂಟಲ್ ತೊಗರಿ, 9.20 ಕ್ವಿಂಟಲ್ ಹೆಸರು ಹಾಗೂ 101.10 ಕ್ವಿಂಟಲ್ ಶೇಂಗಾ ದಾಸ್ತಾನು ಲಭ್ಯವಿದೆ. 1,663 ಮೆಟ್ರಿಕ್ ಟನ್ ಯೂರಿಯಾ, 789 ಮೆ.ಟನ್ ಡಿಎಪಿ, 130 ಟನ್ ಎಂಓಪಿ, 2688 ಟನ್ ಎನ್‌ಪಿಕೆ ಹಾಗೂ 138 ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬರಲಿದ್ದು, ರೈತರಿಗೆ ಪೂರೈಸಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಹೇಳಿದರು.