ಕನ್ನಡಪ್ರಭವಾರ್ತೆ ತಿಪಟೂರು
ಬಿರುಗಾಳಿ ಸಮೇತ ಆಗಮಿಸಿದ ಮಳೆಯಿಂದಾಗಿ ಹಾಲ್ಕುರಿಕೆ ರಸ್ತೆಯಲ್ಲಿರುವ ಶಿವಲಿಂಗ ಕಾಯಿ ಫ್ಯಾಕ್ಟರಿಯಲ್ಲಿದ್ದ ಮಾಲೀಕರ ಮಗ ರಂಜಿತ್ (೧೨) ಎಂಬ ಬಾಲಕನ ಮೇಲೆ ತಗಡಿನ ಶೀಟು ಹಾಗೂ ಇಟ್ಟಿಗೆ ಬಿದ್ದು ಕಣ್ಣು, ಎದೆ ಹಾಗೂ ತೊಡೆ ಭಾಗಕ್ಕೆ ಪೆಟ್ಟು ಬಿದ್ದಿದೆ. ಇನ್ನು ಕಾಯಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆಂದು ನಿರ್ಮಿಸಿರುವ ಶೆಡ್ಡುಗಳ ಮೇಲ್ಚಾವಣಿಗಳು ಹಾರಿ ಹೋಗಿದ್ದು ಹತ್ತಾರು ಕುಟುಂಬಗಳಿಗೆ ಸಂಕಷ್ಟಕ್ಕೆ ನೂಕಿದೆ.
ನಗರದ ಸುತ್ತಮುತ್ತ ಹಾಗೂ ಸಾಕಷ್ಟು ಗ್ರಾಮಗಳಲ್ಲಿನ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕವಿಲ್ಲದೆ ಜನ ಪರದಾಡುವಂತಹ ಸ್ಥಿತಿ ಉಂಟಾಗಿತ್ತು. ಕೆಲವೆಡೆ ಮರಗಳು ಬಿದ್ದ ಪರಿಣಾಮ ಕಾರು, ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳಿಗೆ ಹಾನಿಯಾಗಿದೆ. ಬಿರುಗಾಳಿಯಿಂದಾಗಿ ಸಾಕಷ್ಟು ರಸ್ತೆಗಳಲ್ಲಿ ಮರಗಳು ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಇನ್ನು ಗ್ರಾಮೀಣ ಭಾಗದಲ್ಲಂತೂ ಬಿರುಗಾಳಿಗೆ ನೂರಾರು ಅಡಿಕೆ-ತೆಂಗಿನ ಮರಗಳು ಬಿದ್ದುಹೋಗಿವೆ. ಸಾವಿರಾರು ಬಾಳೆ ಗಿಡಗಳು, ದಾಳಿಂಬೆ, ಪಪ್ಪಾಯ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ನೆಲಕಚ್ಚಿದ್ದು, ಕೆಲ ಭಾಗಗಳಲ್ಲಿ ಮಾವಿನಕಾಯಿಗಳು ನೆಲ ಸೇರಿ ರೈತರು ಸಂಕಷ್ಟ ಅನುಭವಿಸುವಂತಹ ಸ್ಥಿತಿ ಉಂಟಾಗಿದೆ.ನಗರದ ಚರ್ಚ್ ಕಾಂಪೌಂಡ್ ಪಕ್ಕಕ್ಕೆ ಹೊಂದಿಕೊಂಡಂತಿದ್ದ ಬೃಹತ್ ಗಾತ್ರದ ಮರವು ಸೀಟಿನ ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾಗಿದೆ ಆದರೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ತಾಲೂಕಿನ ಮಡೆನೂರು, ದೊಡ್ಡಗೌಡನಕಟ್ಟೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿರುವ ಪರಿಣಾಮ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿರುವ ಸಾವಿರಾರು ದಾಳಿಂಬೆ ಗಿಡಗಳಿಗೆ ಹಾಗೂ ಹಣ್ಣಿಗೆ ಬಂದಿರುವ ಕಾಯಿಗಳಿಗೆ ಬಹುದೊಡ್ಡ ಅನಾವುತ ಸಂಭವಿಸಿದ್ದು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದರೂ ತಾಲೂಕು ಆಡಳಿತ ಇವರ ನೆರವಿಗೆ ಧಾವಿಸದಿರುವುದಕ್ಕೆ ಬೆಳೆಗಾರರು ಆಕ್ರೋಶಗೊಂಡಿದ್ದಾರೆ.