-ರೈತರ ಕೈಹಿಡಿದ ಕುಸುಬೆ
-ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿರುವ ರೈತರ ಕೈಹಿಡಿಯುವ ಭರವಸೆ ಮೂಡಿಸಿದ ಕುಸುಬೆ
-----ಬಿಂದುಮಾಧವ ಮಣ್ಣೂರ
ಎರಡು ದಶಕದಿಂದ ಕಡೆಗಣನೆಯಾಗಿದ್ದ ಕುಸುಬೆ ಬೆಳೆಯತ್ತ ತಾಲೂಕಿನ ರೈತರು ಮತ್ತೆ ಒಲವು ತೋರಿದ್ದು, ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಕುಸುಬೆ ಬೆಳೆಯಲಾಗಿದೆ. ಕಪ್ಪು ಭೂಮಿಯಲ್ಲಿ, ಕಡಿಮೆ ತೇವಾಂಶದಲ್ಲಿ ಹಿಂಗಾರಿನ ಇಬ್ಬನಿಗೆ ಸಮೃದ್ಧವಾಗಿ ಬೆಳೆಯುವ ಕುಸುಬೆಯನ್ನು ತಾಲೂಕಿನ ಕರಜಗಿ ಹೋಬಳಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಪ್ರತಿ ಹಿಂಗಾರಿನಲ್ಲಿ ಕಡಲೆ ಮಾತ್ರ ಬೆಳೆಯುತ್ತಿದ್ದ ತಾಲೂಕಿನ ರೈತರು ದಶಕಗಳ ನಂತರ ಪರ್ಯಾಯ ಬೆಳೆಯಾಗಿ ಕುಸುಬೆ ಬೆಳೆದಿದ್ದಾರೆ. ಪ್ರತಿ ಬಾರಿ ನಿರಂತರವಾಗಿ ಏಕ ಬೆಳೆ ಕಡಲೆಯನ್ನು ಬೆಳೆಯುವುದರಿಂದ ಸೊರಗು ರೋಗಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಪರ್ಯಾಯವಾಗಿ ಕುಸುಬೆ ಬೆಳೆಯುವುದರಿಂದ ರೋಗ ಹಾಗೂ ಕೀಟಗಳ ಹಾವಳಿಯಿಂದ ಪಾರಾಗಬಹುದು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
25 ವರ್ಷಗಳ ಹಿಂದೆ ಕುಸುಬೆ ಬೆಳೆಯುತ್ತಿದ್ದೆವು. ಬೆಳೆಯು ಮುಳ್ಳನ್ನು ಹೊಂದಿರುವ ಕಾರಣ ಕಟಾವು ಮತ್ತು ಒಕ್ಕಲು ಮಾಡಲು ಸಮಸ್ಯೆಯಾಗುತ್ತಿದ್ದರಿಂದ ಕುಸುಬೆ ಬೆಳೆಯಲು ಆಸಕ್ತಿ ಕಳೆದುಕೊಂಡಿದ್ದೆವು. ಈಗ ಮತ್ತೆ ಕುಸುಬೆ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 8,000ದಿಂದ ₹ 9,000 ಬೆಲೆ ಇದ್ದು, ಎಕರೆಗೆ ಐದಾರು ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ. ಗಿಡಗಳು ಎತ್ತರ ಹಾಗೂ ಎಲೆಗಳು ದೊಡ್ಡದಾಗಿದ್ದು, ಹೊಲಕ್ಕೆ ಉತ್ತಮ ಗೊಬ್ಬರವೂ ಸಿಗಲಿದೆ. ಹೀಗಾಗಿ ಕಡಲೆ ಬದಲು ಕುಸುಬೆ ಬೆಳೆದಿದ್ದೇನೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ಕುಸುಬೆ ಬೆಳೆದಿರುವ ರೈತರು ತಿಳಿಸಿದರು.
ಅಫಜಲಪುರದಲ್ಲಿ ರೈತರು ಕಡಿಮೆ ತೇವಾಂಶದಲ್ಲಿ ಹಿಂಗಾರಿನ ಇಬ್ಬನಿಗೆ ಸಮೃದ್ಧವಾಗಿ ಬೆಳೆಯುವ ಕುಸುಬೆಯನ್ನು ತಾಲೂಕಿನ ಕರಜಗಿ ಹೋಬಳಿಯಲ್ಲಿ ಹೆಚ್ಚು ಬೆಳೆದಿರುವುದು.