ಹಾವೇರಿ: ಬೇಡ್ತಿ ಮತ್ತು ವರದಾ ನದಿ ಜೋಡಣೆ, ಬೆಳೆ ವಿಮೆ ಮತ್ತು ಪರಿಹಾರ, ವಿದ್ಯುತ್ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸೇರಿದಂತೆ ವಿವಿಧ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ೭ನೇ ದಿನಕ್ಕೆ ಕಾಲಿಟ್ಟಿದೆ.
ಸತತವಾಗಿ ೬ನೇ ದಿನದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಹಾವೇರಿ ಜಿಲ್ಲೆಯ ನೂರಾರು ರೈತರು ಭಾಗವಹಿಸಿದ್ದರು. ಗುರುವಾರ ನಡೆದ ಹೋರಾಟಕ್ಕೆ ಹಾವೇರಿ ಜಿಲ್ಲೆಯ ವಕೀಲರ ಸಂಘದಿಂದ ಬೆಂಬಲ ವ್ಯಕ್ತವಾಯಿತು. ಈ ವೇಳೆ ವಿ.ಎಸ್. ಹೆಬ್ಬಾಳ, ಸಿ.ಪಿ. ಜಾವಗಲ್, ಎಚ್.ಸಿ. ಸಿದ್ದನಗೌಡ, ಎಂ.ವಿ. ಕುಂಠೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.ಈ ವೇಳೆ ವಕೀಲರ ಸಂಘದ ಕಾರ್ಯದರ್ಶಿ ವಿ.ಎಸ್. ಹೆಬ್ಬಾಳ ಮಾತನಾಡಿ, ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ರೈತ ಸಂಘಟನೆ ಅಥವಾ ಪದಾಧಿಕಾರಿಗಳ ಬೆಂಬಲಕ್ಕೆ ಸದಾ ವಕೀಲರ ಸಂಘಟನೆ ನೆರವಿಗೆ ಧಾವಿಸಲಿದೆ. ಅಲ್ಲದೇ ಈ ಕುರಿತು ಯಾವುದೇ ಪ್ರಕರಣ ದಾಖಲಾದರೂ ಅದನ್ನು ವಕೀಲರ ಸಂಘಟನೆ ಉಚಿತವಾಗಿ ಕಾನೂನು ನೆರವು ನೀಡಿ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾದ್ಯಕ್ಷ ರಾಮಣ್ಣ ಕೆಂಚಳ್ಳೆರ ಮಾತನಾಡಿ, ೧೯೮೨ರಲ್ಲಿ ರೈತರಿಗೆ ಅನುಕೂಲವಾಗುವಂತೆ ರೂಪಿಸಿದ ನಬಾರ್ಡ್ ಯೋಜನೆಯ ಮೊತ್ತವನ್ನು ಈ ಬಾರಿ ಕೇಂದ್ರ ಸರ್ಕಾರವು ಶೇ. ೪೨ರಷ್ಟು ಕಡಿತ ಮಾಡಿದ್ದು, ಇದು ರೈತ ವಲಯಕ್ಕೆ ನುಂಗಲಾಗದ ತುತ್ತಾಗಿದೆ. ಈಗಾಗಲೇ ನಿರಂತರವಾಗಿ ಬರ ಇಲ್ಲವೇ ಅತಿವೃಷ್ಟಿಗೆ ಸಿಲುಕಿ ಭವಿಷ್ಯದ ಬಗ್ಗೆ ಆತಂಕಕ್ಕೆ ಸಿಲುಕಿದ್ದೇವೆ. ನೈಜವಾಗಿ ಈ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕಿತ್ತು, ಆದರೆ ಅದನ್ನು ಕಡಿತ ಮಾಡಿದ್ದು ಕೂಡಲೇ ಸರಿಪಡಿಸಿ ಮೊದಲಿನಂತೆ ಮೊತ್ತ ನಿಗದಿ ಮಾಡಿ ನೀಡುವಂತೆ ಒತ್ತಾಯಿಸಿದರು.ಅಲ್ಲದೇ ಇದುವರೆಗೂ ಜಿಲ್ಲೆಯ ಒಟ್ಟು ೭೬ ಸಾವಿರ ರೈತರು ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರಿಹಾರ ಕೊಡುತ್ತೇವೆ ಎನ್ನುತ್ತಾರೆಯೇ ಹೊರತು ನೀಡುತ್ತಿಲ್ಲ. ೨೦೨೩ ಸೆಪ್ಟೆಂಬರ್ ನಂತರದ ಅವಧಿಯಲ್ಲಿ ಕೊಳವೆಬಾವಿ ಕೊರೆಸಿದ ಯಾವುದೇ ರೈತರಿಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಇದರಿಂದ ರೈತರಿಗೆ ಹಲವಾರು ತೊದರೆಗಳಾಗುತ್ತಿವೆ ಎಂದು ದೂರಿದರು.
ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನೀತ್, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಬಸವರಾಜ ಕಡೂರ, ಲೋಕೇಶ ಸುತಾರ, ಸುರೇಶ್ ದುಳೆಹೊಳೆ, ರಮೇಶ ಮೂಲಿಮನಿ, ಜಟ್ಟೆಪ್ಪ ಕನ್ನಪ್ಪನವರ, ಆನಂದಪ್ಪ ಬಣಕಾರ, ಸಂಜೀವ ಬಾತಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ಬರ ಪರಿಹಾರ ಹಂಚಿಕೆಯಲ್ಲಿ ಜಿಲ್ಲೆಯ ರೈತರಿಗೆ ತಾರತಮ್ಯವಾಗಿದೆ. ಜಿಲ್ಲೆಗೆ ಒಟ್ಟು ₹೭.೪೬ ಕೋಟಿ ಬಂದಿದ್ದು, ಕೆಲವೇ ರೈತರಿಗೆ ಮಾತ್ರ ನೀಡಿದ್ದಾರೆ. ಈ ಕುರಿತು ಅರ್ಜಿ ಕೊಟ್ಟ ಒತ್ತಾಯಿಸಿದ ನಂತರ ಈಗ ಹಾಕುತ್ತೇವೆ, ಎರಡು ದಿನದಲ್ಲಿ ಬರುತ್ತದೆ ಎಂದು ಸಬೂಬು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ಇದುವರೆಗೂ ೬೯ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಹಣ ಸಂದಾಯವಾಗಿದ್ದು, ಬಾಕಿ ೩೩ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಬರ ಪರಿಹಾರ ಬಂದಿಲ್ಲ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ ನಮ್ಮ ಆದ್ಯತೆ ಆಗಿದ್ದು, ಅದಕ್ಕೆ ಇರುವ ಎಲ್ಲ ತೊಂದರೆಗಳನ್ನು ನಿವಾರಿಸಿ ಶೀಘ್ರವೇ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.