ಉಡುಪಿ: ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಹವಾಮಾನಾಧಾರಿತ ಬೆಳೆ ವಿಮೆಯ ಸಮಸ್ಯೆಯಿಂದ ರೈತ ಸಂಕಷ್ಟದಲ್ಲಿದ್ದಾರೆ. ಅಡಕೆ, ಕಾಳುಮೆಣಸು, ಸೇರಿದಂತೆ ಹವಾಮಾನಾಧರಿತ ಬೆಳೆ ವಿಮೆಗೆ ರೈತರು ಹಣ ಪಾವತಿಸಿ ನೊಂದಾಯಿಸಿಕೊಂಡಿದ್ದು, ಈಗ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳ ತಾರತಮ್ಯ ಮತ್ತು ಬೇಜವಾಬ್ದಾರಿಯಿಂದ ರೈತರಿಗೆ ನಷ್ಟವಾಗಿದ್ದು, ತಕ್ಷಣ ರೈತರ ನೆರವಿಗೆ ಬರಬೇಕೆಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ.ಪ್ರತಿ ಗ್ರಾಮ ಪಂಚಾಯಿತಿನಲ್ಲೂ ಮಳೆ ಮಾಪಕಗಳನ್ನು ಅಳವಡಿಸಿದ್ದರೂ ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಳೆ ದಾಖಲೆಗಳಲ್ಲೂ ಅನ್ಯಾಯವಾಗಿದೆ ಎಂದು ಸಂಸದ ಕೋಟ ಮನವಿಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ಕೇವಲ 9.000 ರೈತರಿಗಷ್ಟೇ, ಅದೂ ಅತ್ಯಂತ ಕಡಿಮೆ ವಿಮೆ ಮೊತ್ತ ಪಾವತಿಯಾಗಿದೆ. ಕೆಲವು ರೈತರ ಖಾತೆಗಳಿಗೆ ಕಟ್ಟಿದ ವಿಮಾ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ಬಂದಿದೆ ಎಂದು ಕೋಟ ಮನವಿಯಲ್ಲಿ ವಿವರಿಸಿದ್ದಾರೆ. ವಿಮಾ ಕಂಪನಿ ರೈತರಿಗೆ ನ್ಯಾಯ ಕೊಡದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಸಚಿವರಿಗೆ ಕೊಟ್ಟ ಮನವಿ ಪತ್ರದಲ್ಲಿ ತಿಳಿಸಿದ್ದು, ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆಂದು ಸಂಸದರು ತಿಳಿಸಿದ್ದಾರೆ.