ನಾರಾಯಣದೇವರಕೆರೆಯಲ್ಲಿ ತಮ್ಮ ಮನೆ, ಜಮೀನು, ಆಸ್ತಿಯನ್ನು ಬಿಟ್ಟು ಬಂದು ಮರಿಯಮ್ಮನಹಳ್ಳಿಯಲ್ಲಿ ವಾಸವಾಗಿದ್ದಾರೆ.
ಮರಿಯಮ್ಮನಹಳ್ಳಿ: ರೈತರ ಜಮೀನುಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮರಿಯಮ್ಮನಹಳ್ಳಿ ಹೋಬಳಿ ಸಮಿತಿಯ ರೈತರಿಂದ ಹಮ್ಮಿಕೊಂಡಿದ್ದ ಮರಿಯಮ್ಮನಹಳ್ಳಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆಗೆ ಸೋಮವಾರ ಬೆಳಿಗ್ಗೆ ರೈತರು ಚಾಲನೆ ನೀಡಿ ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ ಮಾತನಾಡಿ, ಮರಿಯಮ್ಮನಹಳ್ಳಿ ಹೋಬಳಿಯ ರೈತರು ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣದೇವರಕೆರೆಯಲ್ಲಿ ತಮ್ಮ ಮನೆ, ಜಮೀನು, ಆಸ್ತಿಯನ್ನು ಬಿಟ್ಟು ಬಂದು ಮರಿಯಮ್ಮನಹಳ್ಳಿಯಲ್ಲಿ ವಾಸವಾಗಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ, ಡಣಾಯಕನಕೆರೆ, ವೆಂಕಟಾಪುರ, ಜಿ. ನಾಗಲಾಪುರ ಕಂದಾಯ ಗ್ರಾಮಗಳ ಜಮೀನುಗಳಲ್ಲಿ ಸುಮಾರು 73 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನುಗಳಿಗೆ ಹಕ್ಕು ಪತ್ರ ನೀಡುವಂತೆ ಅನೇಕ ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ ಎಂದು ಅವರು ವಿವರಿಸಿದರು.ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ ಸಹ ರೈತರಿಗೆ ಹಕ್ಕು ಪತ್ರನೀಡಿಲ್ಲ. 2018-19ರಲ್ಲಿ ಸರ್ಕಾರ ಅಕ್ರಮ- ಸಕ್ರಮಕ್ಕೆ ಅರ್ಜಿ ಹಾಕಲು ಅವಕಾಶ ನೀಡಿತ್ತು. ಆಗ ರೈತರು ಮತ್ತೆ ಅರ್ಜಿ ಸಲ್ಲಿಸಿದ್ದು, ಸರ್ಕಾರ ಮತ್ತೆ ರೈತರಿಗೆ ತಹಶೀಲ್ದಾರ್ ಮುಖಾಂತರ ಹಿಂಬರಹ ಕೊಟ್ಟಿರುತ್ತದೆ. ಸದ್ರಿ ಜಮೀನುಗಳು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ 3 ಕಿ. ಮೀ. ವ್ಯಾಪ್ತಿಯ ಒಳಗೆ ಬರುವುದರಿಂದ ಪಟ್ಟಾ ಕೊಡಲು ಬರುವುದಿಲ್ಲವೆಂದು ಹಿಂಬರಹ ಕೊಟ್ಟಿರುತ್ತಾರೆ ಎಂದು ಸರಿಯಲ್ಲ ಎಂದು ಅವರು ಹೇಳಿದರು.
ಭೂಸ್ವಾದನ ಪುನರ್ವಸತಿ ಪುನರ್ನೆಲೆ ಕಾಯ್ದೆ 2023 ಕ್ಕೆ ರಾಜ್ಯ ಸರ್ಕಾರ 2019ರಲ್ಲಿ ತಂದ ಮಾರಕ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು. ರೈತರು ತುಂಗಭದ್ರಾ ಜಲಾಶಯದ ನಿರ್ಮಾಣಗ ಸಂದರ್ಭದಲ್ಲಿ ಮನೆ, ಮಠ, ಆಸ್ತಿ ಕಳೆದುಕೊಂಡು ಪುನರ್ವಸತಿ ಪಡೆದಂಹ ರೈತರು ಅಂದಿನ ಸರ್ಕಾರಗಳು ರೈತರಿಗೆ ಪುನರ್ವಸತಿ ನೆಲೆಸಿದ್ದಾಗ ಸರ್ಕಾರ ತೋರಿಸಿದ ಜಾಗದಲ್ಲಿ ಅರಣ್ಯ ಜಮೀನನಲ್ಲಿರುವ ಕಲ್ಲು, ಮುಳ್ಳು, ಗಿಡಗಂಟೆಗಳನ್ನು ಕಿತ್ತು ಕಡಿದು ಬಂಗಾರದಂಗೆ ಭೂಮಿಯನ್ನು ಹದಮಾಡಿಕೊಂಡು ಕಳೆದ 73 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂರಲಾಗಿದೆ. ತಕ್ಷಣವೇ ರೈತರಿಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹೊಸಪೇಟೆ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಸ್ಥಳೀಯ ವಕೀಲ ಕುಂಚೂರ್ ಕಲೀಂ ಸಭೆಯಲ್ಲಿ ಮಾತನಾಡಿದರು.
ರೈತ ಸಂಘದ ಮುಖಂಡರಾದ ಟಿ. ಹನುಮಂತಪ್ಪ, ತಳವಾರ್ ಹುಲುಗಪ್ಪ, ಇಬ್ರಾಹಿಂ ಸಾಹೇಬ್, ಖಾಸಿಂ ಸಾಹೇಬ್, ಹುಸೇನ್ ಸಾಹೇಬ್, ಯಮುನೂರಪ್ಪ, ಚಿನ್ನಾಪುರಪ್ಪ ಸೇರಿದಂತೆ ಸ್ಥಳೀಯ ರೈತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.