ಮಾತುಕತೆಗೆ ಮುಂದಾಗದಿದ್ದರೆ ರೈತ ಚಳವಳಿ ತೀವ್ರ: ರಾಜ್ಯ ರೈತ ಸಂಘದ ಎಚ್. ಆರ್. ಬಸವರಾಜಪ್ಪ

KannadaprabhaNewsNetwork |  
Published : Jan 03, 2025, 12:32 AM IST
ಪೋಟೋ: 20ಎಸ್‌ಎಂಜಿಕೆಪಿ08ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಡೆಸುತ್ತಿರುವ ಚಳವಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. | Kannada Prabha

ಸಾರಾಂಶ

ಚಳವಳಿ ನಿರತ ರೈತ ಮುಖಂಡರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುವ ಮೂಲಕ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಚಳವಳಿ ತಿವ್ರಗೊಳಿಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎಚ್ಚರಿಸಿದರು. ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ವೇಳೆ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ । ರೈತರ ವಿವಿಧ ಬೇಡಿಕೆಗೆ ಒತ್ತಾಯ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಳವಳಿ ನಿರತ ರೈತ ಮುಖಂಡರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುವ ಮೂಲಕ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಚಳವಳಿ ತಿವ್ರಗೊಳಿಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎಚ್ಚರಿಸಿದರು.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಡೆಸುತ್ತಿರುವ ಚಳವಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ವೇಳೆ ಮಾತನಾಡಿದರು.

ದೆಹಲಿ ಹೊರವಲಯದಲ್ಲಿ ಈ ಹಿಂದೆ 13 ತಿಂಗಳ ಕಾಲ ರೈತರು ಚಳುವಳಿ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಚಳವಳಿಗೆ ಮಣಿದು ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಿತು. ಅದೇ ವೇಳೆ ಎಂ.ಎಸ್.ಪಿ ಕಾನೂನು ಬದ್ಧವಾಗಿ ಜಾರಿ ಮಾಡುವುದಾಗಿ, ವಿದ್ಯುತ್‍ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿತ್ತು. 2 ವರ್ಷ ಕಳೆದರೂ ಲಿಖಿತ ಭರವಸೆ ಈಡೇರಿಲ್ಲ ಎಂದು ದೂರಿದರು.

ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸಾವಿರಾರು ಮಂದಿ ರೈತರು ನಡೆಸುತ್ತಿರುವ ಚಳವಳಿ ಕೇವಲ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತ ದೇಶದ ರೈತರ ಪರವಾಗಿ ಚಳುವಳಿ ನಡೆಯುತ್ತಿದೆ. ಜಗತ್‍ಸಿಂಗ್ ದಲೈವಾಲರವರು ಸಹ ಈ ದೇಶದ ರೈತರ ಪರವಾಗಿ ಗಾಂಧಿಜೀಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಅಹಿಂಸಾತ್ಮಕ ಮಾರ್ಗದಲ್ಲಿ ಚಳವಳಿ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ರೈತ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಲಾಗುವುದೆಂದು ಹೇಳಿದರು.

ಸರ್ಕಾರ ಕೊಟ್ಟ ಭರವಸೆ ಈಡೇರಿಸದ ಕಾರಣ ಹರಿಯಾಣದ ಶಂಭು ಗಡಿಯಲ್ಲಿ 8 ತಿಂಗಳಿಂದ ರೈತರು ಚಳವಳಿ ನಡೆಸುತ್ತಿದ್ದಾರೆ. ರೈತ ನಾಯಕ ಜಗತ್‍ಸಿಂಗ್‌ ವಾಲರವರು 38 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೊಸ್ಕರ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಇವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನ್ಯಾಯವಾಗಿ ಪರಿಹಾರ ಕೊಟ್ಟು ಅಮೂಲ್ಯವಾದಂತಹ ಅವರ ಜೀವ ಉಳಿಸಬೇಕೆಂದು ಎರಡು ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಆದಾಗ್ಯೂ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಜಿ. ಎನ್. ಪಂಚಾಕ್ಷರಿ ಸೇರಿದಂತೆ ಮತ್ತಿತರರು ಇದ್ದರು.

PREV