ಸಮಸ್ಯೆ ಬಗೆಹರಿಸಿಕೊಳ್ಳಲು ರೈತರು ಸಂಘಟಿತರಾಗಬೇಕು: ಲಕ್ಷ್ಮಿನಾರಾಯಣಗೌಡ

KannadaprabhaNewsNetwork | Published : Oct 9, 2024 1:30 AM

ಸಾರಾಂಶ

ಜಾತ್ಯತೀತ ಹಾಗೂ ಪಕ್ಷಾತೀತವಾಗಿ ರೈತ ಸಂಘಟನೆಯಾಗಬೇಕು. ಈಗಾಗಲೇ ರೈತ ಸಂಘಗಳು ಹಲವು ವಿಭಾಗಗಳಾಗಿವೆ. ಎಲ್ಲಾ ಸಂಘಟನೆಗಳು ಒಂದುಗೂಡಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜನಾಂದೋಲನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ರೈತರು ಸಂಘಟಿತರಾಗಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿ ನಾರಾಯಣ್‌ಗೌಡ ಕರೆ ನೀಡಿದರು.

ಪಟ್ಟಣದ ಹೊಸ ಅಂಚೇಕಚೇರಿ ಆವರಣದಲ್ಲಿ ನಡೆದ ರಾಜ್ಯ ರೈತ ಸಂಘದ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನದಿಂದ ದಿನಕ್ಕೆ ರೈತರ ಸಮಸ್ಯೆ ಹೆಚ್ಚಾಗುತ್ತಿವೆ. ನ್ಯಾಯಾಲಯದಲ್ಲೂ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ನಿವೃತ್ತ ನ್ಯಾಯಾಧೀಶರೊಬ್ಬರು ತಿಳಿಸಿ ಜನಾಂದೋಲನದಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂದು ಅಭಿಪ್ರಾಯಟ್ಟಿದ್ದಾರೆ. ಹೀಗಾಗಿ ನಾವೆಲ್ಲರೂ ಒಂದಾಗಿ ಸಂಘಟನೆ ಬಲಗೊಳಿಸಬೇಕಿದೆ ಎಂದರು.

ಹಲವು ದಶಕಗಳಿಂದ ರೈತಸಂಘ ನಿರಂತರ ಹೋರಾಟ ಮಾಡುತ್ತಿದೆ. ಸಾಕಷ್ಟು ಸಮಸ್ಯೆ ಬಗೆಹರಿಸಲಾಗಿದೆ. ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕಾರ್ಯಕರ್ತರ ಸಭೆ ಆಯೋಜಿಸಿ ಸಂಘಟನೆ ಗಟ್ಟಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ. ಕೃಷಿ ಸಂಬಂಧಿಸಿದ ಸಮಸ್ಯೆಗಳನ್ನು ಹೋರಾಟದ ಮೂಲಕ ಬಗೆಹರಿಸಿಕೊಳ್ಳಲು ರೈತ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರ್ಪಡೆಯಾಗಬೇಕೆಂದು ತಿಳಿಸಿದರು.

ಪ್ರಗತಿಪರ ರೈತ ಕಪಿನಿಗೌಡ ಮಾತನಾಡಿ, ಜಾತ್ಯತೀತ ಹಾಗೂ ಪಕ್ಷಾತೀತವಾಗಿ ರೈತ ಸಂಘಟನೆಯಾಗಬೇಕು. ಈಗಾಗಲೇ ರೈತ ಸಂಘಗಳು ಹಲವು ವಿಭಾಗಗಳಾಗಿವೆ. ಎಲ್ಲಾ ಸಂಘಟನೆಗಳು ಒಂದುಗೂಡಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಭೂಮಿ ಫಲವತ್ತತೆ ಕಡಿಮೆಯಾಗುತ್ತಿದೆ. ರೈತರು ಸಾವಯವ ಕೃಷಿಗೆ ಪ್ರೋತ್ಸಾಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತ ನಾಯಕ ನಂಜುಂಡಸ್ವಾಮಿ ನೇತೃತ್ವದಲ್ಲಿ ಎಲ್ಲಾ ಸಮುದಾಯದ ರೈತರನ್ನು ರಾಜ್ಯಾದ್ಯಂತ ಸಂಘಟಿಸಿ ಬೃಹತ್ ಹೋರಾಟದ ಮೂಲಕ ರೈತರ ಸಮಸ್ಯೆ ಬಗೆಹರಿಸಿರುವ ಇತಿಹಾಸವಿದೆ. ಮಂಡ್ಯ ಜಿಲ್ಲೆಯಲ್ಲಿಯೂ ಹಲವು ರೈತ ನಾಯಕರನ್ನು ಕಾಣಬಹುದು ಎಂದರು.

ರೈತ ಸಂಘದಲ್ಲಿ ಯಾವುದೇ ಜಾತಿ ಧರ್ಮವಿಲ್ಲ. ಎಲ್ಲರಿಗೂ ಪ್ರೀತಿಯ ಆಹ್ವಾನವಿದೆ. ರೈತರು, ಭೂಮಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಚಿಕ್ಕಣ್ಣ ಸೇರಿದಂತೆ ಇತರರು ಇದ್ದರು.

Share this article