ಕಂಪ್ಲಿ: ಇಲ್ಲಿನ ಕೋಟೆಯ ತುಂಗಭದ್ರಾ ನದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇತ್ತೀಚೆಗೆ ಬಾಗಿನ ಅರ್ಪಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಎರಡನೇ ಬೆಳೆಗೆ ನೀರಿಲ್ಲ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ಆಂಧ್ರದ ಎಂಜಿನಿಯರ್‌ಗಳು ನೀರಿನ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ತುಂಗಭದ್ರಾ ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯದ ಎಂಜಿನಿಯರ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಎರಡನೇ ಬೆಳೆಗೆ ನೀರಿನ ಲಭ್ಯತೆ ತಿಳಿಯುತ್ತದೆ. ಅದು ಬಿಟ್ಟು ಈಗಲೇ ಎರಡನೇ ಬೆಳೆಗೆ ನೀರಿಲ್ಲ ಎಂದು ಹೇಳಿದ್ದಾರೆ. ಆಂಧ್ರ ರೈತರ ಪರವಾಗಿ ಅಧಿಕಾರಿಗಳು ಕೆಲಸ ಮಾಡುವ ಮೂಲಕ ನಮ್ಮ ಭಾಗದ ರೈತರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.ನಮ್ಮ ಜಲಾಶಯ, ನಮ್ಮ ನೀರು, ನಮ್ಮ ಹಕ್ಕು ಆಗಿದ್ದು ರಾಜ್ಯದ ರೈತರ ಹಿತ ಕಾಯುವಲ್ಲಿ ರಾಜ್ಯದ ಅಧಿಕಾರಿಗಳು, ಎಂಜಿನಿಯರ್‌ಗಳು ಕಾರ್ಯನಿರ್ವಹಿಸಬೇಕು. ಪ್ರತಿ ಬಾರಿ ನೀರಾವರಿ ಸಲಹಾ ಸಮಿತಿ ಸಭೆ ಮುನಿರಾಬಾದಿನಲ್ಲೇ ನಡೆಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಗೌಡ ಒತ್ತಾಯಿಸಿದರು.
ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಈಗಾಗಲೇ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಬೇಕಿತ್ತು. ಇದರಿಂದ ನದಿ ಮೂಲಕ ವ್ಯರ್ಥವಾಗಿ ಹೋದ 20 ಟಿಎಂಸಿಯಷ್ಟು ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿತ್ತು. ಇದರಿಂದ ರೈತರಿಗೂ ಅನುಕೂಲವಾಗುತ್ತಿತ್ತು. ನೀರು ಬಿಡುವ ಸಮಯದಲ್ಲಿ ತರಾತುರಿಯಾಗಿ ಕಾಮಗಾರಿ ನಿರ್ವಹಿಸಬಾರದು. ಬದಲಿಗೆ ಕಾಲುವೆಗೆ ನೀರು ಬಿಡುವ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ ಮತ್ತು ಶಿಷ್ಯವೃಂದದವರು ಪೌರೋಹಿತ್ಯವಹಿಸಿದ್ದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಅಧ್ಯಕ್ಷರಾದ ವಿ. ವೀರೇಶ, ಡಿ. ಮುರಾರಿ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಪ್ರಮುಖರಾದ ವಾಲಿ ಕೊಟ್ರಪ್ಪ, ಗಂಗಣ್ಣ, ಬಿ. ನಾರಾಯಣಪ್ಪ, ಕುರಿ ಮಂಜುನಾಥ, ತೌಸಿಫ್ ಅಲಿ, ಬಿಂಗಿ ಬಸವರಾಜ, ಯಮನೂರಪ್ಪ, ಡಾ. ಜಗನ್ನಾಥ ಹಿರೇಮಠ, ಅಕ್ಕನ ಬಳಗದ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಇತರರಿದ್ದರು.