ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸ್ಥಳೀಯ ಯೋಜನಾ ವಿಭಾಗ (ಎಲ್‌ಪಿಎ)ದ ಅಡಿ 46 ಗ್ರಾಮಗಳನ್ನು ಸೇರ್ಪಡೆಗೊಳಿಸಿ ಹೊರಡಿಸಿರುವ ಆದೇಶ ರದ್ದತಿಗೆ ಒತ್ತಾಯಿಸಿ ಸೋಮವಾರ ಹುಡಾ ಕಚೇರಿಯ ಎದುರು ರತ್ನಭಾರತ ರೈತ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಈ ಆದೇಶವನ್ನು 10 ದಿನಗಳೊಳಗೆ ಹಿಂಪಡೆಯಲು ರೈತರು ಒತ್ತಾಯಿಸಿದರು.ಹುಡಾ ಈಚೆಗೆ ಹೊಸದಾಗಿ 46 ಗ್ರಾಮಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈಗಾಗಲೇ ಸರಿಯಾದ ಬೆಳೆ ಇಲ್ಲದೆ ಗ್ರಾಮೀಣ ರೈತರು ಆರ್ಥಿಕವಾಗಿ ಪರದಾಡುತ್ತಿದ್ದಾರೆ. ಈ ಹೊಸ ಸೇರ್ಪಡೆಯಿಂದಾಗಿ ಈ ಹಳ್ಳಿಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡಲಿದ್ದು, ರೈತರು ಅತಿ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಶೇ. 95ರಷ್ಟು ರೈತರು ಮತ್ತು ಕೂಲಿಕಾರ್ಮಿಕರಿದ್ದು, ಗ್ರಾಪಂ ತೆರಿಗೆಯನ್ನೇ ಕಟ್ಟಲು ಸಾಧ್ಯವಾಗದಷ್ಟು ಸಂಕಷ್ಟದಲ್ಲಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಗೆ ಬಂದರೆ ತೆರಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ರೈತರ ಜಮೀನುಗಳ ಮೇಲೆ ಕಣ್ಣು ಹಾಕಿರುವುದು ಸರಿಯಲ್ಲ. ಹುಡಾ ಈಗಾಗಲೇ ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವ ಹಳ್ಳಿಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿಲ್ಲ. ಹಾಗಿದ್ದರೂ ಈಗ ಮತ್ತೆ 46 ಹಳ್ಳಿಗಳನ್ನು ಸೇರಿಸಿಕೊಂಡಿರುವುದು ಆಕ್ಷೇಪಾರ್ಹ. ಆದ್ದರಿಂದ 10 ದಿನದೊಳಗೆ ಹೊಸ ಹಳ್ಳಿಗಳ ಸೇರ್ಪಡೆಯ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಬಳಿಕ ಹುಡಾ ಅಧ್ಯಕ್ಷರು ಹಾಗೂ ಆಯುಕ್ತರ ಮೂಲಕ ರೈತರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ರತ್ನಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಸಿ.ಎಂ. ಕಟಗಿ, ವಿರೂಪಾಕ್ಷ ಗಣಿ, ಶಿವಪ್ಪ ದೊಡ್ಡಮನಿ, ಬಸವರಾಜ ಅಣ್ಣಿಗೇರಿ, ಸಕ್ರಪ್ಪ ಕಮ್ಮಾರ, ರಾಜು ಮಲ್ಲಿಗವಾಡ, ಬಸವರಾಜ ಹಕಾರಿ, ಕುಬೇರಪ್ಪ ಕಂಬಳಿ, ಚನ್ನಬಸಪ್ಪ ಸಿದ್ದಣ್ಣವರ, ಜಯಪ್ಪ ಕಮಡೊಳ್ಳಿ, ಲಕ್ಷ್ಮಣಗೌಡ ಶಿವನಗೌಡ್ರ, ರಾಜಶೇಖರ ಪಾಟೀಲ, ಸುನೀಲ ಯಲಿಗಾರ ಸೇರಿದಂತೆ ಹಲವರಿದ್ದರು.
ರೈತರಿಗೆ ತೊಂದರೆಯಾಗಲ್ಲ
ಈ ಕುರಿತು ಸ್ಪಷ್ಟನೆ ನೀಡಿರುವ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಸರ್ಕಾರದ ಅನುಮತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಪರವಾನಗಿ ಪಡೆದು ಗ್ರಾಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಿಯಲ್ ಎಸ್ಟೇಟ್ ಮಾಡುವ ಜಮೀನುಗಳನ್ನು ಮಾತ್ರ ಮಾರುಕಟ್ಟೆ ಮೌಲ್ಯಕ್ಕಿಂತ ಮೂರು ಪಟ್ಟು ದರ ನೀಡಿ ಪಡೆಯಲಾಗುವುದು. ಕಾನೂನಾತ್ಮಕ ಇಲ್ಲದ್ದನ್ನು ತಡೆಗಟ್ಟಲಾಗುವುದು ಎಂದರು.ರೈತರು ತಮ್ಮ ಭೂಮಿಯನ್ನು ಕೃಷಿ ಚಟುವಟಿಕೆ ಮಾಡುತ್ತಿದ್ದರೆ ಅಂತಹ ಜಮೀನುಗಳನ್ನು ಯಾವುದೇ ಕಾರಣಕ್ಕೂ ಮುಟ್ಟುವುದಿಲ್ಲ. ನಿಮ್ಮ ಮನವಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮಾಸ್ಟರ್ ಪ್ಲ್ಯಾನ್ ಮಾಡಲಾಗುವುದು. ಯಾವುದೇ ಕಾರಣಕ್ಕೂ ಈಗಿರುವ ಕರ ಹೆಚ್ಚಿಸುವುದಿಲ್ಲ. ರಿಯಲ್ ಎಸ್ಟೇಟ್ ನವರು ರೈತರ ಹಾದಿ ತಪ್ಪಿಸುತ್ತಿದ್ದಾರೆ. ನ. 14ರಂದು ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು. ನಂತರ ಗ್ರಾಮಸಭೆ ನಡೆಸಲಾಗುವುದು. ರೈತರ ಜಮೀನುಗಳನ್ನು ಯಾವುದೇ ಕಾರಣಕ್ಕೂ ಒತ್ತಾಯ ಪೂರ್ವಕವಾಗಿ ಪಡೆಯುವುದಿಲ್ಲ. ಈ ಹೊಸ ಸೇರ್ಪಡೆಯಿಂದ ರೈತರ ಜಮೀನುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.