ಹಾಲಿ ಇರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ಉತ್ಕೃಷ್ಟ ತರಬೇತಿ ಕೇಂದ್ರಕ್ಕೆ ಜಾಗ ಮೀಸಲು, ರೈತರ ಉತ್ಪನ್ನಗಳಿಗೆ ಕಾಡುವ ಕೀಟಬಾಧೆ ನಿಯಂತ್ರಣಕ್ಕೆ ಅಗತ್ಯ ಕ್ರಿಮಿನಾಶಕ ಸಿಂಪಡಣೆ, ರಸಗೊಬ್ಬರ ಬಳಕೆ ಕುರಿತು ತರಬೇತಿ ಕೇಂದ್ರಕ್ಕೆ ಜಾಗ ಮೀಸಲಿಟ್ಟು, ರೇಷ್ಮೆ ಇಲಾಖೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ರೂಪಿಸಿರುವ ಯೋಜನೆ ಕೈ ಬಿಡಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣ ವ್ಯಾಪ್ತಿಯ ರೇಷ್ಮೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಜಾಗಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಅನ್ಯ ಇಲಾಖೆ ಸ್ಥಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅಧ್ಯಕ್ಷತೆಯಲ್ಲಿ ನಡೆದ ರೈತರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳ ನಿವೇಶನಗಳನ್ನು ಅನ್ಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ತಾಲೂಕು ಆಡಳಿತ ಮತ್ತು ಜನಪ್ರತಿನಿಗಳನ್ನು ತರಾಟೆಗೆ ತೆಗೆದುಕೊಂಡರು.
ತೋಟಗಾರಿಕೆ ಇಲಾಖೆ ಜಾಗದಲ್ಲಿ ಡ್ರಾಮಾಕೇರ್ ಸೆಂಟರ್ ಮತ್ತು ನಗರಸಭೆ ಕಟ್ಟಡ ನಿರ್ಮಾಣಕ್ಕೆ 26 ಎಕರೆ ಜಾಗವನ್ನು ವಶಪಡಿಸಿಕೊಳ್ಳುವುದಕ್ಕೆ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದರು.
ಹಾಲಿ ಇರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ಉತ್ಕೃಷ್ಟ ತರಬೇತಿ ಕೇಂದ್ರಕ್ಕೆ ಜಾಗ ಮೀಸಲು, ರೈತರ ಉತ್ಪನ್ನಗಳಿಗೆ ಕಾಡುವ ಕೀಟಬಾಧೆ ನಿಯಂತ್ರಣಕ್ಕೆ ಅಗತ್ಯ ಕ್ರಿಮಿನಾಶಕ ಸಿಂಪಡಣೆ, ರಸಗೊಬ್ಬರ ಬಳಕೆ ಕುರಿತು ತರಬೇತಿ ಕೇಂದ್ರಕ್ಕೆ ಜಾಗ ಮೀಸಲಿಟ್ಟು, ರೇಷ್ಮೆ ಇಲಾಖೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ರೂಪಿಸಿರುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ಸ್ಥಳದಲ್ಲಿ ರೇಷ್ಮೆ ಮಾರುಕಟ್ಟೆ ಮತ್ತು ಬೆಳೆಗಳ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಬೇಕು. ಜೊತೆಗೆ ರೈತರಿಗೆ ಉಪಯುಕ್ತ ಇಲಾಖೆಗಳನ್ನು ಬೇರೆ ಇಲಾಖೆಗಳಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಸಮಸ್ಯೆ ಉಂಟಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟಿ.ಎಲ್.ವಿನೋದ್ ಬಾಬು ಎಚ್ಚರಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಜಿ.ಪ್ರತಿಭಾ ಉತ್ತರಿಸಿ, ನೆರ ದೇಶಗಳ ಯುದ್ಧದ ಪರಿಣಾಮ ರಸಗೊಬ್ಬರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ರೈತರು ರಸಗೊಬ್ಬರವನ್ನು ಅವಲಂಬಿಸದೆ ಸಾವಯವ ಮತ್ತು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಲು ಮುಂದಾಗಬೇಕು ಎಂದರು.
ತಾಲೂಕಿನ ಆತಗೂರು ಹೋಬಳಿಯ ರೀ ಸರ್ವೇ ಕಾರ್ಯ ಕಳೆದ 20 ವರ್ಷಗಳಿಂದ ನಡೆಯುತ್ತಿದೆ. ಯಾವ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು. ಸಭೆಗೆ ಉತ್ತರ ನೀಡಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಶಾಸಕ ಕೆ.ಎಂ.ಉದಯ್ ಆತಗೂರು ಹೋಬಳಿ ರೀ ಸರ್ವೇ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಸರ್ಕಾರ ಗಮನ ಸೆಳೆದಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಉಂಟಾಗಿರುವ ತಾಂತ್ರಿಕ ದೋಷವನ್ನು ಶೀಘ್ರ ಬಗೆಹರಿಸಲಿದ್ದಾರೆ ಎಂದು ವಿವರಿಸಿದರು.
ಬೇಸಿಗೆ ಕಳೆದು ಮುಂಗಾರು ಮಳೆ ಆರಂಭವಾಗಿ ರೈತರು ಕೃಷಿ ಚಟುವಟಿಕೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಲೆಗಳ ಆಧುನೀಕರಣ ಮತ್ತು ದುರಸ್ತಿ ಕಾರ್ಯಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಇದರಿಂದ ರೈತರ ರುಚಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ರೈತ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮನವಿ ಮಾಡಿದರು. ಸಭೆಯಲ್ಲಿ ರೈತ ಮುಖಂಡರಾದ ಜಿ.ಎ.ಶಂಕರ್, ಬೋರಾಪುರ ಶಂಕರಗೌಡ, ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ತಾಪಂ ರಾಮಲಿಂಗಯ್ಯ, ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ರವಿಶಂಕರ್, ಸಿಡಿಪಿ ಓ.ಅರುಣ್ ಕುಮಾರ್, ವಲಯ ಅರಣ್ಯಾಧಿಕಾರಿ ಗವಿಯಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.