ಹಾವೇರಿ: ರೈತರಿಗೆ ಪರೀಕ್ಷಾರ್ಥವಾಗಿ ಉಚಿತವಾಗಿ ವಿತರಿಸುವ ಸೋಯಾಬಿನ್ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಲು ರೈತರು ಮುಗಿಬಿದ್ದಿರುವ ಘಟನೆ ಮಂಗಳವಾರ ನಗರದ ಹಾನಗಲ್ಲ ರಸ್ತೆ ಎಪಿಎಂಸಿಯಲ್ಲಿರುವ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಗೋದಾಮು ಬಳಿ ನಡೆಯಿತು.ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದಿಂದ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ಅಗತ್ಯವಿರುವ ಸೋಯಾಬಿನ್ ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರಿಂದ ಜಮೀನಿನ ಪಹಣಿ ಹಾಗೂ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಎಫ್‌ಐಡಿಗೆ ಸೇರ್ಪಡೆ ಮಾಡಿದ ನಂತರ ಸೋಯಾಬಿನ್ ಬೀಜದ ಬ್ಯಾಗ್‌ಗಳನ್ನು ಪೂರೈಸಲಾಗುತ್ತಿದೆ. ಉಚಿತವಾಗಿ ಸಿಗುವ ಬೀಜವನ್ನು ಪಡೆದುಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡಿದ್ದರು. ರೈತರಿಂದ ದಾಖಲೆ ಪಡೆದ ಸಿಬ್ಬಂದಿಗಳು ಎರಡು ದಿನ ಬಿಟ್ಟು ಬರುವಂತೆ ತಿಳಿಸುತ್ತಿದ್ದರಿಂದ ರೈತರಲ್ಲಿ ಆಕ್ರೋಶದ ವಾತಾವರಣ ಸೃಷ್ಟಿಯಾಯಿತು. ಇದನ್ನು ಪ್ರಶ್ನಿಸಿದ ರೈತರಿಗೆ, ಶನಿವಾರ ದಾಖಲೆ ಕೊಟ್ಟ ರೈತರನ್ನು ಎಫ್‌ಐಡಿಗೆ ನೋಂದಣಿ ಮಾಡಿಸಿ, ಬೀಜ ವಿತರಿಸಲಾಗುತ್ತಿದೆ. ಸೋಮವಾರ ಕೊಟ್ಟವರಿಗೆ ಮಂಗಳವಾರ ಕೊಡುತ್ತಿದ್ದೇವೆ. ಇವತ್ತು ಕೊಟ್ಟವರಿಗೆ ಬಿತ್ತನೆ ಬೀಜ ಸಿಗುತ್ತೋ ಇಲ್ಲವೋ ಗೊತ್ತಿಲ್ಲ, ಒಂದುವೇಳೆ ದಾಸ್ತಾನು ಇದ್ದರೆ ಬುಧವಾರ ಅಥವಾ ಗುರುವಾರ ಕೊಡುತ್ತೇವೆ ಎಂದು ಸಿಬ್ಬಂದಿ ತಿಳಿಸಿದರು. ಇದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ರೈತರು ಹಾಗೂ ಅಧಿಕಾರಿಗಳ ನಡುವೆ ಗದ್ದಲ ಗಲಾಟೆ ನಡೆದು, ಗೋದಾಮು ಒಳಗಡೆ ಹೋಗಲು ನೂಕುನುಗ್ಗಲು ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಗಿರಿಮಲ್ಲಪ್ಪ ತಳಕಲ್ಲ, ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ, ಗ್ರಾಮೀಣ ಠಾಣೆಯ ಸಿದ್ಧಾರೂಢ ಬಡಿಗೇರ, ಡಿ. ರವಿಕುಮಾರ ರೈತರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಈಗಾಗಲೇ ತೆಗೆದುಕೊಂಡಿರುವ ದಾಖಲೆಗಳ ಅನ್ವಯ ಖುದ್ದು ಆ ರೈತರೇ ಬಂದರೆ ತಲಾ 25 ಕೆಜಿ ತೂಕದ ಒಂದು ಬ್ಯಾಗ್ ಮಾತ್ರ ನೀಡುವುದಾಗಿ ತಿಳಿಸಲಾಯಿತು. ಅದರಂತೆ ಸಿಬ್ಬಂದಿ ಹೆಸರು ಕೂಗಿ ಕರೆದು ದಾಸ್ತಾನು ಖಾಲಿಯಾಗುವವರೆಗೆ ಒಬ್ಬರಿಗೆ ಒಂದೆ ಚೀಲ ವಿತರಿಸಿದರು.ದಾಖಲೆ ವಾಪಾಸ್ ನೀಡಲಿ: ಸೊಯಾಬಿನ್ ಡೆಮೋ ಬೀಜವನ್ನು ಕೊಡುತ್ತಿರುವುದಕ್ಕೆ ಬಂದು ಪಾಳೆ ಹಚ್ಚಿದ್ದೇವೆ. ಮೂರ‍್ನಾಲ್ಕು ದಿನಗಳಿಂದ ದಾಖಲೆ ಪಡೆದುಕೊಂಡು ಬೀಜ ವಿತರಿಸುತ್ತಿದ್ದಾರೆ. ಇವತ್ತು ಬೆಳಗ್ಗೆಯಿಂದ ದಾಖಲಾತಿ ತೆಗೆದುಕೊಂಡಿದ್ದಾರೆ. ನಂತರ ಬೀಜದ ದಾಸ್ತಾನು ಖಾಲಿಯಾಗಿದೆ ಎಂದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗೋಡೌನ್‌ನಲ್ಲಿ ದಾಸ್ತಾನು ಇದ್ದರೆ ಕೊಡಿ, ದಾಸ್ತಾನು ಖಾಲಿಯಾಗಿದೆ ಅಂದರೆ ಬೇಡ. ನಾವು ಒಳಗೆ ಬಂದು ನೋಡುತ್ತೇವೆ ತೋರಿಸಿ ಎಂದರೂ ತೋರಿಸುತ್ತಿಲ್ಲ. ಒಳಗಡೆ ಇಟ್ಟುಕೊಂಡು ಇಲ್ಲಾ ಅಂತಿದ್ದಾರೆ. ಇಲ್ಲಾಂದ್ರೆ ನಮ್ಮ ದಾಖಲೆ ವಾಪಸ್ ಕೊಡಿ ಎಂದು ರೈತರಾದ ಕರಬಸಪ್ಪ ಬಾರ್ಕಿ ಹಾಗೂ ಶಿವಯ್ಯ ಗೌರಿಮಠ ಅವರು ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಳ್ಳಿಯಲ್ಲಿ 50-100 ಎಕರೆ ಪ್ರದೇಶದಲ್ಲಿ ಸೋಯಾಬಿನ್ ಡೆಮೋ ಬೀಜ ಬಿತ್ತನೆ ಮಾಡುವ ಉದ್ದೇಶ ಎಣ್ಣೆ ಬೀಜ ಬೆಳೆಗಾರರ ಸಂಘದ್ದಾಗಿದೆ. ಅದರಂತೆ ಹಾವೇರಿ ತಾಲೂಕಿನಲ್ಲಿ 1,500 ಬ್ಯಾಗ್‌ಗಳನ್ನು ಪೂರೈಸಲಾಗಿತ್ತು. ಮೂರ್ನಾಲ್ಕು ದಿನಗಳಿಂದ ರೈತರಿಂದ ದಾಖಲೆ ಪಡೆದುಕೊಂಡು 709 ರೈತರಿಗೆ ವಿತರಿಸಿದ್ದೇವೆ. ಹಿಂದಿನ ದಾಖಲೆ ಅನ್ವಯ ಮಂಗಳವಾರ 450 ಬ್ಯಾಗ್ ವಿತರಿಸಲಾಗುತ್ತಿತ್ತು. ದಾಸ್ತಾನು ಖಾಲಿಯಾಗುವ ಸಾಧ್ಯತೆ ಹಿನ್ನೆಲೆ ಇವತ್ತು ದಾಖಲಾತಿ ಪಡೆಯಲು ನಿರಾಕರಿಸಿದೆ. ಆದಾಗ್ಯೂ ರೈತರು ಒತ್ತಾಯಿಸಿದ್ದರಿಂದ ದಾಖಲೆ ಪಡೆದುಕೊಂಡಿದ್ದೇವೆ. ಮಂಗಳವಾರ ಸಂಜೆ ತನಕ ಲಭ್ಯ ಇರುವಷ್ಟು ದಾಸ್ತಾನು ಖಾಲಿಯಾಗುವ ತನಕ ವಿತರಿಸಲಾಗಿದೆ ಎಂದು ಹಾವೇರಿ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕ್ಷೇತ್ರಾಧಿಕಾರಿ ಸಂಗಮೇಶ ಹಂಪಿ ಹೇಳಿದರು.