ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿದ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿ, ಜಿಲ್ಲಾ ರೈತ ಸಂಘದ ಕಾರ್ಯಕರ್ತರು, ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತ ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ-ಯುವಜನ ಪರ ಧೋರಣೆಗಳನ್ನು ಜಾರಿ ಮಾಡದೇ ರಾಜ್ಯ ಕಾಂಗ್ರೆಸ್ ಸರ್ಕಾರ ವಚನ ಭ್ರಷ್ಟವಾಗಿದೆ ಎಂದು ಆರೋಪಿಸಿದರು,ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ನೀಡುತ್ತಿರುವ ಅರಣ್ಯ ಹಾಗೂ ಕಂದಾಯ ಇಲಾಖೆ ಕಿರುಕುಳ ಕೂಡಲೇ ನಿಲ್ಲಬೇಕು, ಬಗರ್‌ಹುಕುಂ ಸಾಗುವಳಿ ಭೂಮಿಗಳ ಅರಣ್ಯ ಇಂಡೀಕರಣ ರದ್ದು ಪಡಿಸಬೇಕು. ದೌರ್ಜನ್ಯ ಹಿಂಸೆ ಮೂಲಕ ಒಕ್ಕಲೆಬ್ಬಿಸಿರುವ ಎಲ್ಲ ರೈತರಿಗೆ ಸ್ವಾಧೀನ ವಾಪಸ್ಸು ನೀಡಬೇಕು. ಅರಣ್ಯ ಇಂಡೀಕರಣದ ಹೆಸರಿನಲ್ಲಿ ನೀಡುತ್ತಿರುವ ಕಂದಾಯ ಹಾಗೂ ಅರಣ್ಯ ಇಲಾಖೆ ನೋಟಿಸ್ ನೀಡುವುದು ನಿಲ್ಲಬೇಕು, ನೀಡಿರುವ ನೋಟಿಸ್ ಗಳನ್ನು ವಾಪಸ್ಸು ಪಡೆಯಬೇಕು. ತಕ್ಷಣ ಎಲ್ಲ ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ತಕ್ಷಣ ಹಕ್ಕುಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಪಂಪಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬಾರದು, ಕೃಷಿ ಪಂಪ್ ಸೆಟ್‌ಗಳ ಸ್ವಯಂ ವೆಚ್ಚ ಯೋಜನೆ ಹಿಂಪಡೆಯಬೇಕು, ವಿದ್ಯುತ್ ಖಾಸಗೀಕರಣ ಪ್ರಯತ್ನ ಕೂಡಲೇ ನಿಲ್ಲಿಸಬೇಕು. ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು, ಎಸ್‌ಸಿಎಸ್‌ಪಿ/ಟಿಎಸ್ ಪಿ ಅನುದಾನ ದುರ್ಬಳಕೆ ನಿಲ್ಲಬೇಕು ಎಂದರು.ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್, ರಸ್ತೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಕಾರ್ಯ ಕಲ್ಪಿಸಬೇಕು ರೈತರ ಜಮೀನುಗಳಿಗೆ ಕಾಡು ಹಂದಿ, ಜಿಂಕೆ. ಚಿರತೆ. ನವಿಲು ಮುಂತಾದ ಕಾಡು ಪ್ರಾಣಿಗಳ ಅವಳಿ ಹೆಚ್ಚಾಗಿದ್ದು, ಶಾಶ್ವತ ರೈಲ್ವೇ ಕಾರಿಡಾರ್‌ಗಳನ್ನು ಹಾಕಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಸೂಕ್ತ ಕ್ರಮವಹಿಸಬೇಕು. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ರಸ್ತೆಗಳು ಹಾಳಾಗಿದ್ದು ಡಾಂಬರೀಕರಣ ಮಾಡಿ ಸಾರಿಗೆ ವ್ಯವಸ್ಥೆ ಮಾಡಬೇಕು. ರೈತರು ಹೆಚ್ಚಾಗಿ ಹೈನುಗಾರಿಕೆಗೆ ಅವಲಂಭಿತ ವಾಗಿರುವುದರಿಂದ ಜಾನುವಾರು ಗಣತಿಗೆ ಅನುಗುಣವಾಗಿ ಎಲ್ಲಾ ಗ್ರಾಮಗಳಲ್ಲಿ ಗೊಮಾಳಗಳನ್ನು ಮೀಸಲಿಟ್ಟು ರಕ್ಷಿಸಬೇಕು.
ಜಿಲ್ಲಾ ಹಾಲು ಒಕ್ಕೂಟವು ಅಭಿವೃದ್ಧಿ ನೆಪದಲ್ಲಿ ರೈತರಿಗೆ ಸರಿಯಾದ ಬೆಲೆ ಕೊಡದೆ ೪೫ ಕೋಟಿ ರೂಗಳನ್ನು ಸಾಲ ಮಾಡಿ ಐಸ್ ಕ್ರೀಂ ಪ್ಲಾಂಟ್ ಮಾಡುವುದಾಗಿ ಅನಗತ್ಯ ಖರ್ಚು ಮಾಡಿ ರೈತರಿಗೆ ಸಾಲ ವರಿಸುತ್ತಿದ್ದು ಸೂಕ್ತ ತನಿಖೆ ನಡೆಸಿ ಕ್ರಮವಹಿಸಬೇಕು. ಚಾಮರಾಜನಗರ ತಾಲೂಕಿನ ಬದನಗುಪ್ಪ ಕೆಲ್ಲಂಬಳ್ಳಿ ಗ್ರಾಮದ ರೈತರ ಜಮೀನುಗಳು ಕೆಐಎಡಿಬಿಗೆ ಭೂಸ್ವಾಧೀನವಾಗಿದ್ದು ರೈತರ ಜಮೀನು ಹಾಗೂ ಮರಗಳಿಗೆ ಸೂಕ್ತ ಬೆಲೆ ನಿಗದಿ ಮಾಡಿ ತಕ್ಷಣ ಪರಿಹಾರ ಕೊಡಬೇಕು ಅಥವಾ ಭೂ ಸ್ವಾಧೀನವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.ಸಚಿವ ಸಂಪುಟ ಸಭೆಯ ಮುನ್ನ ಜಿಲ್ಲಾ ರೈತರೊಂದಿಗೆ ಜಿಲ್ಲಾಡಳಿತ ಚರ್ಚಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಕುಮಾರ್ ಮೇಲಾಜಿಪುರ, ನಾಗಪ್ಪ ವೀರನಪುರ, ಅಶೋಕ್, ಪುಟ್ಟರಾಜು, ಶಿವಮೂರ್ತಿ, ಸತೀಶ್, ಸಮಂತ್ ಕೆಂಪಮ್ಮ ಇತರರು ಭಾಗವಹಿಸಿದ್ದರು.