ರೈತರ ಒತ್ತಡ: ಮತ್ತೆ ಠುಸ್ಸಾಯ್ತು ಟ್ರಯಲ್ ಬ್ಲಾಸ್ಟ್...!

KannadaprabhaNewsNetwork |  
Published : Mar 06, 2024, 02:16 AM IST
೫ಕೆಎಂಎನ್‌ಡಿ-೧ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಕೃಷ್ಣರಾಜಸಾಗರದ ನಾರ್ಥ್‌ಬ್ಯಾಂಕ್ ಎದುರು ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶವಿರುವುದಾಗಿ ನಂಬಿಸಿ ಜಾರ್ಖಂಡ್‌ನಿಂದ ಹಿರಿಯ ವಿಜ್ಞಾನಿ ಆದಿತ್ಯ ರಾಣಾ ನೇತೃತ್ವದ ತಜ್ಞರ ತಂಡವನ್ನು ಪರೀಕ್ಷಾರ್ಥ ಸ್ಫೋಟ ನಡೆಸುವ ಸಲುವಾಗಿ ಕೆಆರ್‌ಎಸ್‌ಗೆ ಕರೆಸಲಾಗಿತ್ತು. ವಿಜ್ಞಾನಿಗಳ ತಂಡ ಸೋಮವಾರ ಸಂಜೆ ಕೆಆರ್‌ಎಸ್‌ಗೆ ಆಗಮಿಸಿತ್ತು. ಆದಿತ್ಯರಾಣಾ ಜೊತೆಗೆ ಸಾಮ್ಲಿಯಾನಾ, ಸಾಕೇತ್ ಚಟರ್ಜಿ, ರಕ್ಷಿತ್ ಅವರು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರದ ಜಲಾಶಯದ ಸಮೀಪ ಜಿಲ್ಲಾಡಳಿತ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಟ್ರಯಲ್ ಬ್ಲಾಸ್ಟ್ ಮತ್ತೆ ಠುಸ್ ಆಗಿದೆ. ಗಣಿ ಲಾಭಿಗೆ ಮಣಿದಿದ್ದ ಜಿಲ್ಲಾಡಳಿತ ಹೈಕೋರ್ಟ್ ಆದೇಶವಿರುವ ನೆಪವನ್ನು ಮುಂದಿಟ್ಟುಕೊಂಡು ಪರೀಕ್ಷಾರ್ಥ ಸ್ಫೋಟಕ್ಕೆ ಮುಂದಾಗಿ ಮುಖಭಂಗಕ್ಕೊಳಗಾಗಿದೆ. ಎರಡು ಪರೀಕ್ಷಾರ್ಥ ಸ್ಫೋಟಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದ ರೈತಸಂಘ ಮೂರನೇ ಟ್ರಯಲ್ ಬ್ಲಾಸ್ಟ್ ಕೂಡ ಠುಸ್ ಆಗುವಂತೆ ಮಾಡಿದೆ.

ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶವಿರುವುದಾಗಿ ನಂಬಿಸಿ ಜಾರ್ಖಂಡ್‌ನಿಂದ ಹಿರಿಯ ವಿಜ್ಞಾನಿ ಆದಿತ್ಯ ರಾಣಾ ನೇತೃತ್ವದ ತಜ್ಞರ ತಂಡವನ್ನು ಪರೀಕ್ಷಾರ್ಥ ಸ್ಫೋಟ ನಡೆಸುವ ಸಲುವಾಗಿ ಕೆಆರ್‌ಎಸ್‌ಗೆ ಕರೆಸಲಾಗಿತ್ತು. ವಿಜ್ಞಾನಿಗಳ ತಂಡ ಸೋಮವಾರ ಸಂಜೆ ಕೆಆರ್‌ಎಸ್‌ಗೆ ಆಗಮಿಸಿತ್ತು. ಆದಿತ್ಯರಾಣಾ ಜೊತೆಗೆ ಸಾಮ್ಲಿಯಾನಾ, ಸಾಕೇತ್ ಚಟರ್ಜಿ, ರಕ್ಷಿತ್ ಅವರು ಆಗಮಿಸಿದ್ದರು.

ಮಂಗಳವಾರ ಬೆಳಗ್ಗೆ ೧೦.೩೦ಕ್ಕೆ ವಿಜ್ಞಾನಿಗಳ ತಂಡ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಕಾವೇರಿ ಸಭಾಂಗಣದಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ಸಭೆ ನಡೆಸಿತು. ಸಭೆ ನಡೆಸಿದ ಬಳಿಕ ಬೇಬಿ ಬೆಟ್ಟಕ್ಕೆ ತೆರಳಿ ಪರೀಕ್ಷಾರ್ಥ ಸ್ಫೋಟ ನಡೆಸಲಿರುವ ಜಾಗ ಗುರುತಿಸಲು ಸಿದ್ಧತೆ ನಡೆಸಿದ್ದರು.

ಟ್ರಯಲ್ ಬ್ಲಾಸ್ಟ್ ವಿರುದ್ಧ ರೊಚ್ಚಿಗೆದ್ದ ಅನ್ನದಾತರು:

ಕೆಆರ್‌ಎಸ್ ಜಲಾಶಯದ ನಾರ್ಥ್‌ಬ್ಯಾಂಕ್ ಎದುರು ಸೇರಿದ ನೂರಾರು ರೈತರು ಟ್ರಯಲ್ ಬ್ಲಾಸ್ಟ್ ನಡೆಸುವುದರ ವಿರುದ್ಧ ರೊಚ್ಚಿಗೆದ್ದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ತಂಡೋಪತಂಡವಾಗಿ ರೈತರು ಆಗಮಿಸುತ್ತಿದ್ದರು. ಟ್ರಯಲ್ ಬ್ಲಾಸ್ಟ್‌ಗೆ ಆಗಮಿಸಿರುವ ತಜ್ಞರ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸಿದರು.

ಮಾತುಕತೆಗೆ ಕರೆದ ಜಿಲ್ಲಾಡಳಿತ:

ಟ್ರಯಲ್ ಬ್ಲಾಸ್ಟ್ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸುತ್ತಿದ್ದ ರೈತ ಮುಖಂಡರನ್ನು ಜಿಲ್ಲಾಡಳಿತ ಸಭೆಗೆ ಬರುವಂತೆ ಆಹ್ವಾನಿಸಿತು. ದೂರವಾಣಿ ಮೂಲಕ ರೈತ ಮುಖಂಡರನ್ನು ಸಂಪರ್ಕಿಸಿ ಸಭೆಗೆ ಆಹ್ವಾನ ನೀಡಿತು. ಈ ಸಮಯದಲ್ಲಿ ರೈತರ ಜೊತೆ ಕಾಂಗ್ರೆಸ್ ಬೆಂಬಲಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಧರಣಿ ನಡೆಸುತ್ತಿದ್ದರು. ಜಿಲ್ಲಾಡಳಿತದ ಆಹ್ವಾನದ ಮೇರೆಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದ ಹೋರಾಟಗಾರರ ತಂಡ ಸಭೆಗೆ ತೆರಳಿದರು.

ಬಿಜೆಪಿಯಿಂದ ಪ್ರತ್ಯೇಕ ಹೋರಾಟ:

ಪರೀಕ್ಷಾರ್ಥ ಸ್ಫೋಟದ ವಿರುದ್ಧ ಒಂದೆಡೆ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಾರ್ಥ್‌ಬ್ಯಾಂಕ್ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದರು.

ಕೆಆರ್‌ಎಸ್ ಬೃಂದಾವನದ ಕಡೆ ತೆರಳಲು ಬಿಜೆಪಿ ಕಾರ್ಯಕರ್ತರು ತೆರಳಲು ಯತ್ನಿಸಿದಾಗ ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ಸಮಯದಲ್ಲಿ ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ಮಾತಿನ ಚಕಮಕಿ ನಡೆಸಿದರು.

ರೈತ ಮುಖಂಡರನ್ನು ಮಾತ್ರ ಮಾತುಕತೆಗೆ ಕಳುಹಿಸಿದ್ದೀರಿ. ನಾವೂ ಹೋರಾಟಗಾರರೇ. ನಮ್ಮನ್ನು ಸಭೆಗೆ ಕಳುಹಿಸದೇ ಏಕೆ ತಡೆಯುತ್ತಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಕಾರ್ಯಕರ್ತರು ಬೃಂದಾವನದೊಳಗೆ ಪ್ರವೇಶಕ್ಕೆ ಮುನ್ನುಗ್ಗಿದಾಗ ಪೊಲೀಸರು ಗೇಟ್ ಬಂದ್ ಮಾಡಿದರು.

ಬೃಂದಾವನ ಗೇಟ್ ಬಳಿ ಮತ್ತೆ ಪೊಲೀಸರೊಂದಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ವಾಗ್ವಾದ, ಮಾತಿನ ಚಕಮಕಿ ನಡೆಸಿದರು. ಅಧಿಕಾರಿಗಳ ಸಭೆಗೆ ಬಿಡದ ಪೊಲೀಸರ ವಿರುದ್ಧ ಕಿಡಿಕಾರಿದರು. ಗಲಾಟೆಯಿಂದ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಸಂಧಾನಸಭೆ ನಡೆಸಿ ಸಭೆಯಲ್ಲಿ ಭಾಗವಹಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದ ಪ್ರಮುಖ ನಾಲ್ಕೈದು ಜನರಿಗೆ ಅವಕಾಶ ಕಲ್ಪಿಸಿದರು. ಇದರಿಂದ ಉಳಿದ ಕಾರ್ಯಕರ್ತರು ಸಮಾಧಾನಗೊಂಡು ಸಭೆಯ ನಿರ್ಧಾರಕ್ಕೆ ಕಾದುಕುಳಿತರು.

ಹೈಕೋರ್ಟ್ ಆದೇಶ ತೋರಿಸುವಂತೆ ಬಿಗಿ ಪಟ್ಟು

ಹೈಕೋರ್ಟ್ ಆದೇಶದ ನೆಪವನ್ನು ಮುಂದಿಟ್ಟುಕೊಂಡು ಟ್ರಯಲ್ ಬ್ಲಾಸ್ಟ್‌ಗೆ ರೈತಸಂಘ ಹಾಗೂ ಬಿಜೆಪಿ ಮುಖಂಡರ ಅನುಮತಿ ಪಡೆದುಕೊಳ್ಳಲು ನೀರಾವರಿ ಇಲಾಖೆ ಹಾಗೂ ಗಣಿ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಯಿತು.

ಟ್ರಯಲ್ ಬ್ಲಾಸ್ಟ್ ನಡೆಸುವ ಸಂಬಂಧ ನಡೆದ ಸಭೆಯಲ್ಲಿ, ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ ನಡೆಸುವ ಸಂಬಂಧ ತೀರ್ಪಿನಲ್ಲಿ ಎಲ್ಲಿ ಹೇಳಿದೆ ಎಂದು ತೋರಿಸುವಂತೆ ರೈತ ಮುಖಂಡರು ಪಟ್ಟು ಹಿಡಿದರು. ಈ ಸಮಯದಲ್ಲಿ ತಡವರಿಸಿದ ನೀರಾವರಿ ಮತ್ತು ಗಣಿ ಇಲಾಖೆ ಅಧಿಕಾರಿಗಳು ಆದೇಶ ಪ್ರತಿಯನ್ನು ಕೈಯ್ಯಲ್ಲಿಡಿದುಕೊಂಡೇ ರೈತ ಮುಖಂಡರತ್ತ ತೋರಿಸಿದರು. ನೀವು ತೋರಿಸಿದರೆ ಆಗುವುದಿಲ್ಲ. ಒಮ್ಮೆ ಓದಿ ಹೇಳಿ. ನಾವೂ ತಿಳಿದುಕೊಳ್ಳುತ್ತೇವೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಗಣಿ ಅಧಿಕಾರಿಗಳು ಓದಿ ಹೇಳಿದಾಗ, ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಹೈಕೋರ್ಟ್ ಎಲ್ಲಿ ಹೇಳಿದೆ?. ಆದೇಶವೇ ಇಲ್ಲದೆ ನೀವೇಕೆ ಆತುರಾತುರವಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದೀರಿ?. ನೀವೂ ಗಣಿ ಮಾಲೀಕರೊಂದಿಗೆ ಶಾಮೀಲಾಗಿ ಸಂಚು ನಡೆಸಿದ್ದೀರಿ ಎಂದು ಅಧಿಕಾರಿಗಳನ್ನು ಎ.ಎಲ್.ಕೆಂಪೂಗೌಡ, ಕೆ.ಆರ್.ರವೀಂದ್ರ ಸೇರಿದಂತೆ ಹಲವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಆದರೂ, ಕುಂಟು ನೆಪಗಳನ್ನು ಹೇಳಿ ಟ್ರಯಲ್ ಬ್ಲಾಸ್ಟ್‌ಗೆ ರೈತ ಮುಖಂಡರನ್ನು ಮನವೊಲಿಸಲು ಯತ್ನಿಸಿದರೂ ಅವರ ಯಾವುದೇ ಪ್ರಯತ್ನಕ್ಕೂ ಮುಖಂಡರು ಒಪ್ಪಲಿಲ್ಲ. ಕೊನೆಗೆ ಸಭೆಯಲ್ಲಿ ಟ್ರಯಲ್ ಬ್ಲಾಸ್ಟ್ ಮುಂದೂಡಿಕೆಗೆ ನಿರ್ಧಾರ ಮಾಡಲಾಯಿತು.

ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶವೇ ಮಾಡಿಲ್ಲ..!

ಕೃಷ್ಣರಾಜಸಾಗರ ಜಲಾಶಯದ ೨೦ ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದ ಹೈಕೋರ್ಟ್, ಟ್ರ೦ಯಲ್ ಬ್ಲಾಸ್ಟ್ ನಡೆಸುವುದಕ್ಕೆ ಆದೇಶವನ್ನೇ ಮಾಡಿಲ್ಲವೆಂಬ ಸತ್ಯ ಮಂಗಳವಾರ ಬಹಿರಂಗಗೊಂಡಿತು.

ಹೈಕೋರ್ಟ್ ಆದೇಶದ ನೆಪವೊಡ್ಡಿ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದ್ದ ಜಿಲ್ಲಾಡಳಿತದ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಶಾಸಕರು, ರೈತರು, ಹೋರಾಟಗಾರರ ದಿಕ್ಕು ತಪ್ಪಿಸಿ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದ್ದರ ಹಿಂದಿನ ಉದ್ದೇಶವೇನಿರಬಹುದೆಂಬ ಪ್ರಶ್ನೆ ಮೂಡಿದೆ. ಗಣಿ ಮಾಲೀಕರ ಲಾಭಿಗೆ ಮಣಿದು ಹೈಕೋರ್ಟ್ ಆದೇಶವಿರುವುದಾಗಿ ಸುಳ್ಳು ಮಾಹಿತಿ ನೀಡಿ ನಂಬಿಸುವ ಪ್ರಯತ್ನ ನಡೆಸಿತೇ? ಎಂಬ ಶಂಕೆ ಎಲ್ಲರಲ್ಲೂ ಮೂಡುವಂತೆ ಮಾಡಿದೆ.

ಹೈಕೋರ್ಟ್ ಆದೇಶವಿರುವ ಸುಳ್ಳು ಮಾಹಿತಿಯನ್ನು ಅಧಿಕಾರಿಗಳ ಸಹಿತವಾಗಿ ಜನಪ್ರತಿನಿಧಿಗಳೂ ನಂಬಿದ್ದರು. ಇದೀಗ ತಜ್ಞರ ಸಭೆಯಲ್ಲಿ ಆದೇಶ ಇಲ್ಲದಿರುವ ಮಾಹಿತಿ ಬಟಾಬಯಲಾಗುವುದರೊಂದಿಗೆ ಜಿಲ್ಲಾಡಳಿತ ಮುಖಭಂಗಕ್ಕೊಳಗಾಗಿದೆ. ವಕೀಲರು ೬ ತಿಂಗಳು ಕಾಲಾವಕಾಶ ಕೇಳಿದ್ದ ಪತ್ರವನ್ನೇ ಆದೇಶ ಪ್ರತಿ ಎಂದು ಬಿಂಬಿಸಿದ್ದ ಅಧಿಕಾರಿಗಳು. ಸದ್ಯ ರೈತರ ಹೋರಾಟಕ್ಕೆ ಮಣಿದು ಟ್ರಯಲ್ ಬ್ಲಾಸ್ಟ್ ಮೂಂದೂಡಿಕೆಯಾಗಿದೆ. ಸಭೆ ನಡೆಸಿ ಪರೀಕ್ಷಾರ್ಥ ಸ್ಥಳ ಗುರುತಿಸಲು ಬಂದಿದ್ದ ತಜ್ಞರ ತಂಡ ವಾಪಸಾಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶವೇ ಮಾಡಿಲ್ಲ. ಅಧಿಕಾರಿಗಳ ಮೌಖಿಕ ಹೇಳಿಕೆಯಿಂದ ನಾವು ಆದೇಶ ಇದೆ ಅಂದುಕೊಂಡಿದ್ದೆವು. ಇದುವರೆಗೂ ಕೋರ್ಟ್ ಆದೇಶದ ಪ್ರತಿ ತೋರಿಸಿಲ್ಲ. ನಾವು ಕೂಡ ಕುಲಂಕುಷವಾಗಿ ತೀರ್ಪಿನ ಪ್ರತಿಯನ್ನು ಓದಿರಲಿಲ್ಲ. ಸಂಪೂರ್ಣ ಮಾಹಿತಿ ತಿಳಿದ ಮೇಲೆ ನಮಗೂ ಆರ್ಶರ್ಯವಾಗಿದೆ. ಆದೇಶ ಪ್ರತಿ ತೋರಿಸಿ ಎಂದರೆ ತೋರಿಸಿಲ್ಲ. ಟ್ರಯಲ್ ಬ್ಲಾಸ್ಟ್ ನಡೆದಿದ್ದರೆ ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿತ್ತು.’

- ದರ್ಶನ್ ಪುಟ್ಟಣ್ಣಯ್ಯ, ಕಾಂಗ್ರೆಸ್ ಬೆಂಬಲಿತ ಶಾಸಕ, ಮೇಲುಕೋಟೆ ಕ್ಷೇತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ