ಕನಕಪುರ: ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹಸು, ಮೇಕೆ, ಕುರಿಗಳು ಮೇಯಿಸುವುದನ್ನು ನಿಷೇಧಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಕರ್ನಾಟಕ ಸರ್ಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸಲು ನಿಷೇದಾಜ್ಞೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡದರು.
ಅರಣ್ಯ ಪ್ರದೇಶದ ಗಡಿ ಭಾಗದ ಗ್ರಾಮಗಳ ರೈತರು ಜಾನುವಾರುಗಳ ಮೇವಿಗೆ ಅರಣ್ಯಕ್ಕೆ ಹೋಗುವುದನ್ನು ನಿಷೇಧ ಮಾಡಿದ್ದು, ಇದು ರೈತ ವಿರೋಧಿ ನೀತಿಯಾಗಿದೆ. ಕೂಡಲೇ ಸಚಿವರು ಹೊರಡಿಸಿರುವ ಆದೇಶ ಹಿಂಪಡೆಯಬೇಕು. ರಾಜ್ಯದಲ್ಲಿ ಲಕ್ಷಾಂತರ ಜಾನುವಾರು ಕಾಡಂಚಿನ ಅರಣ್ಯ ಪ್ರದೇಶದಲ್ಲಿ ಮೇವನ್ನು ಅವಲಂಭಿಸಿದ್ದು ಈ ಆದೇಶದಿಂದ ಜಾನುವಾರುಗಳಿಗೆ ನೀರು, ಆಹಾರದ ಕೊರತೆ ಉಂಟಾಗಲಿದೆ ಎಂದು ಹೇಳಿದರು.ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು ಈಶ್ವರ್ ಖಂಡ್ರೆ ಅವರು ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಅರಣ್ಯಕ್ಕೆ ಬಿಡದಂತೆ ನಿಷೇಧ ಹೇರಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರೈತರು ಜಾನುವಾರು ಮೇಯಿಸಲು ಹೋದರೆ ಇಲಾಖೆ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ರಾಜ್ಯದ ಹಲವಾರು ಕಡೆಯಿಂದ ಅರಣ್ಯ ಸಚಿವರಿಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬರುವ ಜಾನುವಾರುಗಳಿಗೆ ಅನುಮತಿ ನಿಷೇಧಿಸಲಾಗಿದೆ. ರೈತರು ಹೊಟ್ಟೆಪಾಡಿಗಾಗಿ ಕಳಕೆ ತಂದು ಮಾರಾಟ ಮಾಡಿದರೆ, ಅವರ ವಿರುದ್ಧ ದೂರು ದಾಖಲಿಸುತ್ತೀರಿ, ಆದರೆ ಬಿದಿರನ್ನು ಕಡಿದು ಮಾರಾಟ ಮಾಡಿ ಹಣ ಸಂಪಾದನೆ ಮಾಡುವವರನ್ನು ಹಿಡಿಯುತ್ತಿಲ್ಲ, ಹಳ್ಳಿಕಾರ್ ಹಸುಗಳನ್ನು ಮನೆಯಲ್ಲಿ ಕಟ್ಟಿಹಾಕಿ ಮೇಯಿಸಲು ಸಾಧ್ಯವಿಲ್ಲ. ಅವುಗಳನ್ನು ಅರಣ್ ದಲ್ಲೇ ಮೇಯಿಸಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗಿ ಖಾಸಗಿ ರೆಸಾರ್ಟ್ಗ್‌ಳಿಗೆ ಅನುಮತಿ ನೀಡಿದ್ದೀರಿ ಎಂದು ಆರೋಪಿಸಿದರು.ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಸರ್ವೆ ನಂಬರ್ ಒಂದರಿಂದ ಆರನೇ ನಂಬರ್‌ನಲ್ಲಿ 35 ಎಕರೆ ಇದ್ದು ಸುಮಾರು 90 ಎಕರೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಕೆರೆಯ ಪಕ್ಕ ರೈತರು ಮನೆ ಕಟ್ಟಿದರೆ ಬಫರ್ ಜೋನ್ ಎಂದು ಮನೆ ಕಟ್ಟಲು ಬಿಡುವುದಿಲ್ಲ. ಆದರೆ ಒಬ್ಬ ಪ್ರಭಾವಿ ವ್ಯಕ್ತಿಗೆ ಯಾವ ಮಾನದಂಡಗಳನ್ನು ಆಧರಿಸಿ ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಸಾಮಾಜಿಕ ಹೋರಾಟಗಾರ ಪ್ರಶಾಂತ ಹೊಸದುರ್ಗ ಮಾತನಾಡಿ, ಸಿದ್ದರಾಮಯ್ಯನ ಸರ್ಕಾರದಲ್ಲಿ ಎಲ್ಲರೂ ಮೊಹಮ್ಮದ್ ತುಘಲಕ್ ಗಳಾಗಿದ್ದಾರೆ. ಕೋಲಾರದಲ್ಲಿ ಜಿಂಕೆಗಳು ಸತ್ತಾಗ ಅವರನ್ನು ಬಂಧಿಸಲಾಗಿದೆ. ಆದರೆ ಸರ್ಕಾರ ಇದು ನಮ್ಮ ವೈಫಲ್ಯ ಎಂದು ಒಪ್ಪಿಕೊಳ್ಳಲಿಲ್ಲ, ಈಶ್ವರ್ ಖಂಡ್ರೆ ಅವರು ಈ ಪ್ರಕರಣದಲ್ಲಿ ರಾಜಿನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮುನಿಸಿದ್ದಯ್ಯ ಸೇರಿದಂತೆ ರೈತ ಸಂಘದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಗತಿಪರ ಸಂಘಟನೆ ಸದಸ್ಯರು ಪಾಲ್ಗೊಂಡಿದ್ದರು.
ಕೆ ಕೆ ಪಿ ಸುದ್ದಿ 04:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಕನಕಪುರ ಅರಣ್ಯ ಇಲಾಖೆ ಮುಂದೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸಬಾರದೆಂಬ ನಿಷೇಧಾಜ್ಞೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.