ಕನ್ನಡಪ್ರಭ ವಾರ್ತೆ ಜೇವರ್ಗಿ
ಭಾರತ ಮಾಲಾ ಯೋಜನೆಯಡಿ ರಸ್ತೆ ಕಾಮಗಾರಿಗೆ ಜಮೀನುಗಳನ್ನು ಭೂ ಸ್ವಾಧೀನ ಪಡೆಸಿಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಶುಕ್ರವಾರ ಪಿಎನ್‌ಸಿ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸಿದರು.ತಾಲೂಕಿನ ಮಿತಿಯೊಳಗೆ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿ 150ಸಿ ಚನ್ನೈನಿಂದ ಸೂರತ್‌ಗೆ ಹಾದು ಹೋಗಿರುವುದರಿಂದ ರೈತರ ಜಮೀನಿಗೆ ಸರಿಯಾದ ಬೆಲೆ ನೀಡದೆ, ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಮೋಸ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಳಗ್ಗೆ 11ಕ್ಕೆ ಎತ್ತಿನ ಬಂಡಿಗಳ ಮೂಲಕ ಹಳ್ಳಿಗಳಿಂದ ಬಂದ ರೈತರು ಪಟ್ಟಣದ ಬಸವೇಶ್ವರ ವೃತ್ತದಿಂದ ಬಿಜಾಪುರ ರಸ್ತೆಯಲ್ಲಿರುವ ಪಿಎನ್‌ಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ರೈತರ ಜಮೀನಿಗೆ 20ರಿಂದ 25 ಲಕ್ಷ ರು. ನೀಡಿದ್ದು, ಜೇವರ್ಗಿ ತಾಲೂಕಿನ ರೈತರ ಜಮೀನಿಗೆ 10ರಿಂದ 15 ಲಕ್ಷ ಪರಿಹಾರ ನೀಡಿ ಮೋಸ ಮಾಡಿದ್ದಾರೆ. ಸೂಕ್ತ ಭೂ ಪರಿಹಾರ ನೀಡಿಲ್ಲ. ಹೀಗಾಗಿ ಜಮೀನು ಕಳೆದು ಕೊಂಡ ರೈತರಿಗೆ ಅನ್ಯಾಯವಾಗಿದೆ. ಈಗಾಗಲೆ ನಡೆಸಲಾಗುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದ್ದು, ರಸ್ತೆಗೆ ಬಳಿಸಲಾಗುತ್ತಿರುವ ಮುರುಂ ಸಂಪೂರ್ಣ ಮಣ್ಣು ಮಿಶ್ರಿತವಾಗಿದೆ. ಆರಂಭದ ಹಂತದಲ್ಲಿಯೆ ಗುಣಮಟ್ಟ ಕಾಯ್ದುಕೊಳ್ಳಲಾಗದ ಗುತ್ತಿಗೆದಾರರು ಬೃಹತ್ ರಸ್ತೆ ಕಾಮಗಾರಿ ಗುಣಮಟ್ಟ ಇವರಿಂದ ಕಷ್ಟಸಾಧ್ಯ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕೊಡಲಿ ಪೆಟ್ಟು ಬಿಳುವ ಸಾಧ್ಯತೆಗಳು ಗೋಚರಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ವಿಶೇಷ ಭೂ ಸ್ವಾಧೀನಾಧಿಕಾರಿ ರಾಮಚಂದ್ರ ಗಡೇದ, ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರಿಗೆ ಮನವಿ ಸಲ್ಲಿಸಿದರು. ಅಧಿಕಾರಿಗಳು ಬೇಡಿಕೆ ಈಡೆರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಿರೆದಾರ, ವಿರೇಶ ದೊಡ್ಡಮನಿ, ನಾಗಣ್ಣ ಬುಟ್ನಾಳ, ಸಂಗೀತಾ ಕಲ್ಲೂರ, ಭಾಗಣ್ಣ ಗೌನಳ್ಳಿ, ಶಿಕರೇಶ, ಶಶಿಕಲಾ ಮಾಲಗತ್ತಿ, ಗುರಮ್ಮಗೌಡ್ತಿ, ಪರಶುರಾಮ ಕೆಲ್ಲೂರ, ಪರಮೇಶ್ವರ ಬಿರಾಳ, ಭೀಮಾಶಂಕರ ಜನಿವಾರ, ಕೃಷ್ಣಾ ರಾಠೋಡ, ಸಿದ್ದಣ್ಣ ಕೊಡಚಿ, ಮಲ್ಲು ಬಿರಾಳ ಸೇರಿದಂತೆ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಯಾದಗಿರಿ ಜಿಲ್ಲೆಯ ಮಾದರಿಯಲ್ಲಿಯೆ ಜೇವರ್ಗಿ ತಾಲೂಕಿನ ರೈತರಿಗೆ ಭೂ ಪರಿಹಾರ ನೀಡಬೇಕು. ಕೈಬಿಟ್ಟು ಹೋಗಿರುವ ರಸ್ತೆ, ಬೋರವೆಲ್ ಹಾಗೂ ಬಾವಿ, ಕಟ್ಟಡಗಳ ಮೌಲ್ಯ ಮಾಪನ ಮಾಡಿಸಿ ಸಮರ್ಪಕ ಪರಿಹಾರ ಕಲ್ಪಿಸಬೇಕು. ಈಗಾಗಲೆ ಮೌಲ್ಯ ಮಾಪನ ಮಾಡಿದ ಜಮೀನುಗಳ ಪರಿಹಾರ ಧನ ಶೀಘ್ರ ಕಲ್ಪಿಸಬೇಕು. ತಾಲೂಕಿನ ರೈತರ ಸಮಸ್ಯೆಗಳಿಗೆ ಜಿಲ್ಲಾ ವಿಶೇಷ ಭೂ ಸ್ವಾಧೀನ ಅಧಿಕಾರಿ ಹಾಗೂ ಯೋಜನಾ ನಿರ್ದೇಶಕರು ಸ್ಪಂದಿಸಬೇಕು.- ಡಾ.ಅಜಯಸಿಂಗ್, ಕೆಕೆಆರ್‌ಡಿಬಿ ಅಧ್ಯಕ್ಷ